ಪುತ್ತೂರು, ಮಾ. 18: ದರ್ಬೆಯ ಪ್ರವಾಸಿ ಮಂದಿರ ಸಮೀಪ ಬುಧವಾರ ಓಮಿನಿ ಕಾರು ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ದರ್ಬೆಯಿಂದ ಪ್ರವಾಸಿ ಮಂದಿರದವರೆಗೆ ಬಂದ KA 21 N 5654 ಸಂಖ್ಯೆಯ ಓಮಿನಿ, ಪ್ರವಾಸಿ ಮಂದಿರದ ಹತ್ತಿರ ತಿರುವು ಪಡೆದು ಮರು ದರ್ಬೆ ಕಡೆಗೆ ಚಲಿಸಲು ಯತ್ನಿಸುತ್ತಿದ್ದ ವೇಳೆ, ಪಿಲೋಮೇನಾ ಕಾಲೇಜು ಕಡೆಯಿಂದ ಬರುತ್ತಿದ್ದ KA 21 B 7940 ಸಂಖ್ಯೆಯ ರಿಕ್ಷಾ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಓಮಿನಿ ರಸ್ತೆ ಡಿವೈಡರ್ ಮೇಲೆ ಹತ್ತಿ ನಿಂತಿದ್ದು, ರಿಕ್ಷಾ ರಸ್ತೆ ಬದಿಯ ಚರಂಡಿಯನ್ನು ದಾಟಿ ಕೆಲ ದೂರ ಹೋಗಿ ನಿಂತಿದೆ. ಗುದ್ದಿದ ಪರಿಣಾಮ ರಿಕ್ಷಾ ಚಾಲಕ ವಾಹನದಿಂದ ಹೊರಗೆ ಎಸೆಯಲ್ಪಟ್ಟು ಸಣ್ಣ ಗಾಯಗಳಿಗೆ ಒಳಗಾಗಿದ್ದಾನೆ.
ಗಾಯಗೊಂಡ ಚಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಸಂಬಂಧಪಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.














