ಉಡುಪಿ, ಮಾ.25: ಜಿಲ್ಲೆಯ ಪ್ರಖ್ಯಾತ ಯುವ ಭಜನಾ ತರಬೇತುದಾರ ಪ್ರಕಾಶ್ ಕುಲಾಲ್ (35) ಹೃದಯಾಘಾತದಿಂದ ನಿಧನರಾದರು. ಅವರು ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದ ನಿವಾಸಿಯಾಗಿದ್ದರು.
ಮಾಹಿತಿಯಂತೆ, ನಡೂರಿನಲ್ಲಿ ನಡೆದ ಭಜನಾ ಕಾರ್ಯಕ್ರಮವನ್ನು ಮುಗಿಸಿ ಮನೆಗೆ ಬಂದಿದ್ದ ಅವರು ರಾತ್ರಿ ಮಲಗಿದ್ದರು. ಬೆಳಿಗ್ಗೆ ಆತ್ಮೀಯರೊಬ್ಬರು ಕರೆ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಟುಂಬಸ್ಥರು ಮನೆಯ ಮಾಡಿನ ಹೆಂಚು ತೆರಳಿ ಒಳಗೆ ಪ್ರವೇಶಿಸಿದಾಗ, ಅವರು ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವುದು ಪತ್ತೆಯಾಯಿತು.
ಅತ್ಯಂತ ಚುರುಕಿನ ಹಾಗೂ ಪ್ರತಿಭಾಶಾಲಿ ಭಜನಾ ತರಬೇತುದಾರರಾಗಿದ್ದ ಪ್ರಕಾಶ್ ಕುಲಾಲ್, ಸಂಕೀರ್ತನ ಮಂದಾರ್ತಿ ಸೇರಿದಂತೆ ಹಲವಾರು ದೊಡ್ಡ ಭಜನಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.














