ಉಡುಪಿ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ರೌಡಿ ಶೀಟರ್ ಸೇರಿದಂತೆ ಇಬ್ಬರು ಆರೋಪಿಗಳ ವಿರುದ್ಧ ಜಿಲ್ಲಾ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರು ಮಾ.26ರಂದು ಗಡಿಪಾರು ಆದೇಶ ಜಾರಿ ಮಾಡಿದ್ದಾರೆ.
ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕಳತ್ತೂರು ಗ್ರಾಮದ ಸೂರ್ಯಗುಡ್ಡೆ ನಿವಾಸಿ ನೌಫಿಲ್ ಮತ್ತು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಸುಹಾನ್ ಪೂಜಾರಿ ಗಡಿಪಾರುಗೊಂಡ ಆರೋಪಿಗಳಾಗಿದ್ದಾರೆ.
ನೌಫಿಲ್ ವಿರುದ್ಧ ಐದು ಪ್ರಕರಣಗಳು ದಾಖಲಾಗಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ರೌಡಿ ಶೀಟರ್ ತೆರೆಯಲಾಗಿದೆ. ಇದೇ ರೀತಿಯಲ್ಲಿ ಸುಹಾನ್ ಪೂಜಾರಿ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿವೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನೌಫಿಲ್‌ನನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿಗೆ ಹಾಗೂ ಸುಹಾನ್ ಪೂಜಾರಿಯನ್ನು ಯಾದಗಿರಿ ಜಿಲ್ಲೆಯ ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.














