ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಪ್ರಚೋದಿಸುವ ರೀತಿಯ ಕಮೆಂಟ್ ಹಾಕಿದ ಆರೋಪದ ಮೇಲೆ ಕಂಕನಾಡಿ ನಗರ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ.
2026ರ ಜನವರಿ ತಿಂಗಳಲ್ಲಿ ಮಂಗಳೂರು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕಿರಾತ್ (ಕುರಾನ್ ಪಠಣ) ಸ್ಪರ್ಧೆಯ ವಿಡಿಯೋ ‘ಉದಯವಾಣಿ’ ಫೇಸ್‌ಬುಕ್ ಪುಟದಲ್ಲಿ ಪ್ರಸಾರವಾಗುತ್ತಿದ್ದ ವೇಳೆ, ಗಣೇಶ್ ಪ್ರಸಾದ್ ಎಂಬಾತನು ತನ್ನ ಫೇಸ್‌ಬುಕ್ ಖಾತೆಯಿಂದ “ಮಕ್ಕಳ ತಲೆಯನ್ನು ಬ್ರೈನ್‌ವಾಶ್ ಮಾಡಿ ನಾಳೆ ದೇಶಕ್ಕೆ ಬಾಂಬ್ ಇಡೋಕೆ ಕಳಿಸೋದು ಅಷ್ಟೇ” ಎಂದು ಪ್ರಚೋದನಕಾರಿ ಕಮೆಂಟ್ ಹಾಕಿದ್ದಾನೆ ಎಂಬ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 15/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 196 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 66ರಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ತನಿಖೆಯಲ್ಲಿ, ಕೋಮು ಪ್ರಚೋದಕ ಕಮೆಂಟ್ ಹಾಕಿದ್ದ ಫೇಸ್‌ಬುಕ್ ಖಾತೆ ಕಾಸರಗೋಡು ಜಿಲ್ಲೆ ಮಂಜೇಶ್ವರ ನಿವಾಸಿ ಗಣೇಶ್ ಪ್ರಸಾದ್ (41), ತಂದೆ ಎಸ್.ಎನ್. ಕಬನುರಾಯ ಅವರಿಗೆ ಸೇರಿದ್ದಾಗಿದೆ ಎಂಬುದು ಬೆಳಕಿಗೆ ಬಂದಿದೆ.
ದಿನಾಂಕ 27-03-2026ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಲುವಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.














