ಹೊಸನಗರ: ತಾಲ್ಲೂಕಿನ ಹುಲಿಕಲ್ ಘಾಟಿಯ (ಬಾಳೆಬರೆ ಘಾಟ್, ರಾಜ್ಯ ಹೆದ್ದಾರಿ–52) ಹೇರ್‌ಪಿನ್ ತಿರುವಿನಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಇನ್ನೂ ನಾಲ್ವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಭಾಗದಲ್ಲಿ ಈ ಹಿಂದೆ ಭೂಕುಸಿತ ಸಂಭವಿಸಿದ್ದರಿಂದ ಶಾಶ್ವತ ಬೃಹತ್ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಮಣ್ಣು ಜಾರಿ ಕಾರ್ಮಿಕರ ಮೇಲೆ ಬಿದ್ದಿದೆ ಎಂದು ತಿಳಿದುಬಂದಿದೆ.
ಮೃತರನ್ನು ನಗರ ಸಮೀಪದ ಚಕ್ಕಾರು ಗ್ರಾಮದ ರಾಘು, ಹಾವೇರಿ ಜಿಲ್ಲೆಯ ನೆಲಗಲ್ಲು ಗ್ರಾಮದ ಶಬ್ಬೀರ್ ಹಾಗೂ ರಾಜು ಎಂದು ಗುರುತಿಸಲಾಗಿದೆ.
ಗಾಯಗೊಂಡ ಕಾರ್ಮಿಕರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತದೇಹಗಳನ್ನು ಹೊರತೆಗೆಯಲು ಎಸ್‌ಡಿಆರ್‌ಎಫ್ ತಂಡ ಮಂಗಳೂರಿನಿಂದ ಹೊರಟಿದೆ. ನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.














