ಪುತ್ತೂರು: 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಶೇ. 96ರ ಉತ್ತಮ ಸಾಧನೆ ದಾಖಲಿಸಿದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ತಲಾ ಮೂರು ರಾಜ್ಯ ರ್ಯಾಂಕ್‌ಗಳನ್ನು ಪಡೆದು ಕಾಲೇಜು ಗಮನಾರ್ಹ ಸಾಧನೆ ಮಾಡಿದೆ.
ಈ ಬಾರಿ ಕಾಲೇಜಿನ 42 ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಪೂರ್ವ (ಕಾವು ನಿವಾಸಿ ವಸಂತ ಸಲ್ವಂಕರ್ ಮತ್ತು ಅರುಣ ಪಿ.ಕೆ. ದಂಪತಿಗಳ ಪುತ್ರಿ) 595 ಅಂಕಗಳನ್ನು ಪಡೆದು ರಾಜ್ಯದಲ್ಲಿ 5ನೇ ರ್ಯಾಂಕ್ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಪೀದಾ (ಮುಕೈ ನಿವಾಸಿ ಎಂ. ಹಾಜಿ ಮೊಹಮ್ಮದ್ ಕುಂಞ ಮತ್ತು ಜಮೀಲಾ ದಂಪತಿಗಳ ಪುತ್ರಿ) 595 ಅಂಕಗಳೊಂದಿಗೆ ರಾಜ್ಯದಲ್ಲಿ 6ನೇ ರ್ಯಾಂಕ್ ಪಡೆದಿದ್ದಾರೆ.
ಸೋನಿಕಾ ಕುಟಿನ್ನಾ ( ಮೌರೀಸ್ ಕುಟಿನ್ನಾ ಮತ್ತು ಜ್ಯೋತಿ ಕುಟಿನ್ನಾ ದಂಪತಿಗಳ ಪುತ್ರಿ) 592 ಅಂಕಗಳೊಂದಿಗೆ ರಾಜ್ಯದಲ್ಲಿ 9ನೇ ರ್ಯಾಂಕ್, ದೀಪ್ತಿ ಕೆ.ಎಸ್. (ಮಾಡಾವು ನಿವಾಸಿ ಚಂದ್ರಶೇಖರ ಕೆ.ಎಸ್. ಮತ್ತು ಪುಷ್ಪಲತಾ ದಂಪತಿಗಳ ಪುತ್ರಿ) 591 ಅಂಕಗಳೊಂದಿಗೆ ರಾಜ್ಯದಲ್ಲಿ 10ನೇ ರ್ಯಾಂಕ್ ಪಡೆದಿದ್ದಾರೆ.
ಬಿ.ವಿ. ಅನು, ಆಯಿಷಾ ಮಹಪೂಲ್ ಹಾಗೂ ಪ್ರಣಮ್ ತಲಾ 590 ಅಂಕಗಳನ್ನು ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗದಲ್ಲಿ ಅಶ್ವಿನ್ ಜಾರ್ಜ್ 580 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಒಟ್ಟು 682 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಕಾಲೇಜು ಒಟ್ಟಾರೆ ಶೇ. 96 ಫಲಿತಾಂಶ ದಾಖಲಿಸಿದೆ. ಇದರಲ್ಲಿ 214 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 362 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿಭಾಗವಾರು ಫಲಿತಾಂಶದಲ್ಲಿ ಕಲಾ ವಿಭಾಗ ಶೇ. 95, ವಾಣಿಜ್ಯ ವಿಭಾಗ ಶೇ. 98 ಹಾಗೂ ವಿಜ್ಞಾನ ವಿಭಾಗ ಶೇ. 91 ಫಲಿತಾಂಶ ದಾಖಲಿಸಿದೆ ಎಂದು ಕಾಲೇಜು ಪ್ರಕಟಣೆಯಲ್ಲಿ ತಿಳಿಸಲಾಗಿದೆ.














