ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದ ವಯೋಮಿತಿಯಲ್ಲಿ 60 ದಿನಗಳ ವಿಶೇಷ ಸಡಿಲಿಕೆ ನೀಡಿದ್ದು, ಈ ಕುರಿತು ಸರ್ಕಾರ ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ.
2026-27ನೇ ಶೈಕ್ಷಣಿಕ ಸಾಲಿಗೆ ಮಾತ್ರ ಸೀಮಿತವಾಗಿ ಈ ವಿನಾಯಿತಿ ಅನ್ವಯವಾಗಲಿದೆ. ಶೈಕ್ಷಣಿಕ ವರ್ಷದ ಜೂನ್ 1 ಅನ್ನು ಆಧಾರ ದಿನಾಂಕವಾಗಿ ಪರಿಗಣಿಸಿ ಗರಿಷ್ಠ 60 ದಿನಗಳವರೆಗೆ ವಯಸ್ಸಿನ ಸಡಿಲಿಕೆಯನ್ನು ನೀಡಲಾಗಿದೆ. ಹೀಗಾಗಿ ಜೂನ್ 1ರಿಂದ ಜುಲೈ 30ರೊಳಗೆ ಜನ್ಮದಿನ ಹೊಂದಿರುವ ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಸಡಿಲಿಕೆಯ ಪರಿಣಾಮವಾಗಿ 5 ವರ್ಷ 10 ತಿಂಗಳು ಪೂರ್ಣಗೊಂಡ ಮಕ್ಕಳಿಗೂ ಪ್ರಸಕ್ತ ಸಾಲಿನಲ್ಲೇ ಶಾಲೆಗೆ ಸೇರಲು ಕಾನೂನಾತ್ಮಕ ಅವಕಾಶ ದೊರೆಯಲಿದೆ.
ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಪೋಷಕರು ಕಳೆದ ಕೆಲವು ತಿಂಗಳುಗಳಿಂದ ಆಗ್ರಹ ವ್ಯಕ್ತಪಡಿಸಿದ್ದರು. ಸರ್ಕಾರಕ್ಕೆ ಮನವಿಗಳನ್ನೂ ಸಲ್ಲಿಸಿದ್ದರು. ಈ ಮನವಿಗಳನ್ನು ಪರಿಗಣಿಸಿರುವ ಸರ್ಕಾರವು ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ ಕಲಂ 20ರಡಿ ತನ್ನ ವಿಶೇಷ ಅಧಿಕಾರ ಬಳಸಿ ಈ ವಿನಾಯಿತಿಯನ್ನು ಘೋಷಿಸಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ ಹೊರಬಂದಿರುವ ಈ ಆದೇಶವು ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲದೆ, ಅನುದಾನಿತ ಹಾಗೂ ಖಾಸಗಿ ಶಾಲೆಗಳು (ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ) ರಾಜ್ಯದಾದ್ಯಂತ ಕಡ್ಡಾಯವಾಗಿ ಅನುಸರಿಸಬೇಕಾಗಿದೆ.
ದಾಖಲಾತಿ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆ ಉಂಟಾಗದಂತೆ ‘ಸ್ಯಾಟ್ಸ್’ (SATS) ತಂತ್ರಾಂಶದಲ್ಲಿ ಅಗತ್ಯ ಬದಲಾವಣೆಗಳನ್ನು ತಕ್ಷಣ ಜಾರಿಗೊಳಿಸುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ವಿಶೇಷ ಸಡಿಲಿಕೆಯಿಂದ ರಾಜ್ಯದಾದ್ಯಂತ ಸುಮಾರು 2.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಅನುಕೂಲವಾಗಲಿದ್ದು, ಆರ್‌ಟಿಇ (RTE) ಅಡಿಯಲ್ಲಿ ಸೀಟು ಬಯಸುವ ಪೋಷಕರಿಗೂ ಇದು ಸಹಾಯಕವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.














