ಸುಳ್ಯ: ಸಾಲವಾಗಿ ನೀಡಿದ್ದ ಹಣವನ್ನು ಹಿಂತಿರುಗಿಸುವಂತೆ ಕೇಳಿದ ಯುವತಿಯ ಮನೆಯಲ್ಲಿ ಚಿನ್ನಾಭರಣ ಕಳವು ನಡೆದ ಘಟನೆ ಸುಳ್ಯ ಕಸಬಾದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ (20) ಅವರು ನೀಡಿದ ದೂರಿನ ಪ್ರಕಾರ, ಅವರ ತಂದೆಗೆ ಶೃತಿ @ ವಿಶ್ಮೀತ (37) ಎಂಬಾಕೆಯೊಂದಿಗೆ ಪರಿಚಯವಿದ್ದು, ಆಕೆಗೆ ಸುಮಾರು ₹6 ಲಕ್ಷ ಹಣವನ್ನು ಸಾಲವಾಗಿ ನೀಡಲಾಗಿತ್ತು. ಹಣವನ್ನು ಹಿಂತಿರುಗಿಸುವಂತೆ ಪುಣ್ಯಶ್ರೀ ಕೇಳಿದ ಹಿನ್ನೆಲೆಯಲ್ಲಿ, ಆರೋಪಿತೆ ಏ.7ರಂದು ಅವರ ಮನೆಗೆ ಬಂದು ಹಣ ನೀಡುವುದಾಗಿ ತಿಳಿಸಿದ್ದಳು.
ಆ ಬಳಿಕ ಪುಣ್ಯಶ್ರೀ ಕೆಲಸಕ್ಕೆ ತೆರಳಿದ್ದು, ರಾತ್ರಿ ಮನೆಗೆ ವಾಪಸ್ಸಾದಾಗ ಕಪಾಟಿನ ಬೀಗದ ಕೀ ಬಿದ್ದಿರುವುದು ಗಮನಕ್ಕೆ ಬಂದಿದೆ. ಕಪಾಟು ಪರಿಶೀಲಿಸಿದಾಗ ಮನೆಯಲ್ಲಿ ಇಟ್ಟಿದ್ದ ಸುಮಾರು ₹5 ಲಕ್ಷ ಮೌಲ್ಯದ 62½ ಗ್ರಾಂ ತೂಕದ ಚಿನ್ನಾಭರಣಗಳು ಕಳವಾಗಿರುವುದು ಪತ್ತೆಯಾಗಿದೆ.
ಈ ಕೃತ್ಯವನ್ನು ಮನೆಗೆ ಬಂದಿದ್ದ ಶೃತಿ @ ವಿಶ್ಮೀತ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ದೂರಿನ ಆಧಾರದ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. 49/2026, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 331(3), 305 ಅಡಿ ಪ್ರಕರಣ ದಾಖಲಾಗಿದೆ.
ತನಿಖೆ ನಡೆಸಿದ ಪೊಲೀಸರು ಶೃತಿ @ ವಿಶ್ಮೀತ ಹಾಗೂ ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳವಾದ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!