ಗುಂಡ್ಲುಪೇಟೆ: ಕಳ್ಳತನಕ್ಕೂ ಮುನ್ನ ದೇವರಿಗೆ ಕೈಮುಗಿದು, ಹಣೆಗೆ ಕುಂಕುಮ ಹಚ್ಚಿಕೊಂಡು ಬಳಿಕ ಹುಂಡಿ ಎಗರಿಸಿರುವ ವಿಚಿತ್ರ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.
ಗ್ರಾಮದ ಶಕ್ತಿ ದೇವತೆ ಪಟ್ಟದರಾಣಿ ದೇವಾಲಯದಲ್ಲಿ ಗುರುವಾರ ತಡರಾತ್ರಿ ಈ ಕೃತ್ಯ ನಡೆದಿದೆ. ದೇವಸ್ಥಾನಕ್ಕೆ ನುಗ್ಗಿದ ಖದೀಮ ಗರ್ಭಗುಡಿಯ ಬಳಿಗೆ ತೆರಳಿ ದೇವರಿಗೆ ನಮಸ್ಕರಿಸಿದ್ದಾನೆ. ಅಲ್ಲಿದ್ದ ಕುಂಕುಮವನ್ನು ತೆಗೆದು ಹಣೆಗೆ ಹಚ್ಚಿಕೊಂಡ ಬಳಿಕ, ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಸಂಪೂರ್ಣ ಘಟನೆ ದೇವಸ್ಥಾನದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ದೇವಾಲಯದಲ್ಲಿ ಈ ಹಿಂದೆಯೂ ಹಲವು ಬಾರಿ ಹುಂಡಿ ಹಣ ಕಳುವಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿ ಭದ್ರತೆಗಾಗಿ ಸಿಸಿಟಿವಿ ವ್ಯವಸ್ಥೆ ಅಳವಡಿಸಿದ್ದರು. ಆರೋಪಿಯು ಕಳ್ಳತನಕ್ಕೂ ಮೊದಲು ದೇವರಿಗೆ ನಮನ ಸಲ್ಲಿಸಿರುವ ದೃಶ್ಯಗಳು ಇದೀಗ ಪೊಲೀಸರಿಗೆ ಪ್ರಮುಖ ಸುಳಿವಾಗಿವೆ.
ಘಟನೆಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!