ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಪದವು ಗ್ರಾಮದಲ್ಲಿ ಏಪ್ರಿಲ್ 12ರಂದು 7 ವರ್ಷದ ಮಗುವಿನ ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು ದ್ವಿಚಕ್ರ ವಾಹನದಲ್ಲಿ (ಕೆಟಿಎಂ ಬೈಕ್) ಬಂದ ಅಪರಿಚಿತ ವ್ಯಕ್ತಿ ಬೆದರಿಸಿ ಎಳೆದುಕೊಂಡು ಹೋದ ಘಟನೆ ನಡೆದಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2026, ಕಲಂ 309(4) BNS 2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕೆಟಿಎಂ ಬೈಕ್ ಸವಾರನೊಬ್ಬನ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆತನೇ ಆರೋಪಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸರು ಸಂಬಂಧಿತ ಬೈಕ್ ಸವಾರನನ್ನು ವಿಚಾರಣೆ ನಡೆಸಿದ್ದಾರೆ.
ವಿಚಾರಣೆಯಲ್ಲಿ ಆತನಿಗೆ ಘಟನೆಗೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟಗೊಂಡಿದೆ. ಈ ಕುರಿತು ಆತನ ಕುಟುಂಬದವರ ಮನವಿಯ ಮೇರೆಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಉಂಟಾಗಬಾರದೆಂದು ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ.
ಪ್ರಕರಣದ ನಿಜವಾದ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.














