ಪುತ್ತೂರು, ಏ.17: ಶತಮಾನ ಕಾಲದಿಂದ ಧಾರ್ಮಿಕ, ಶಿಕ್ಷಣ ಹಾಗೂ ಸಾಮಾಜಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಬೈತಡ್ಕ ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಸೌಹಾರ್ದತೆಯ ಸಂಕೇತವಾಗಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಬಿ.ಪಿ. ಅಬ್ದುಲ್ ಹಮೀದ್ ಹಾಜಿ ಹೇಳಿದರು.
ಏಪ್ರಿಲ್ 17ರಿಂದ 26ರವರೆಗೆ ಬೈತಡ್ಕ ಮಖಾಂ ಉರೂಸ್ ನಡೆಯಲಿದ್ದು, ಈ ಬಾರಿ ಉರೂಸ್ ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಮಾತ್ರ ಸೀಮಿತವಾಗದೆ, ಸ್ವಂತ ಸೂರಿಲ್ಲದೆ ಸಂಕಷ್ಟದಲ್ಲಿರುವ 10 ಮಂದಿ ಬಡವರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುವ ವಿಶೇಷ ಕಾರ್ಯಕ್ರಮವೂ ನಡೆಯಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಾನಿಗಳ ಸಹಕಾರದೊಂದಿಗೆ ‘ಬೈತುಲ್ ಮದ್ದೂರ್ ಹೌಸಿಂಗ್ ಪ್ರಾಜೆಕ್ಟ್’ ಹೆಸರಿನಲ್ಲಿ ಮನೆಗಳ ನಿರ್ಮಾಣ ಮಾಡಲಾಗಿದೆ. ಮನೆಗಳ ಉದ್ಘಾಟನೆ ಏಪ್ರಿಲ್ 17ರಂದು ನಡೆಯಲಿದೆ. ಬೈತಡ್ಕ ಜಮಾಅತ್ ವ್ಯಾಪ್ತಿಯ ಆಶಕ್ತರಿಂದ ಮನೆ ನಿರ್ಮಾಣಕ್ಕಾಗಿ 27 ಅರ್ಜಿಗಳು ಬಂದಿದ್ದು, ಮೊದಲ ಹಂತದಲ್ಲಿ 10 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದವರಲ್ಲಿ ಒಬ್ಬರಿಗೆ ಜಾಗವಿಲ್ಲದ ಹಿನ್ನೆಲೆ ಕಾಣಿಯೂರಿನ ಡಾ. ಉದಯ ಕುಮಾರ್ ಅವರು ಜಾಗ ದಾನ ಮಾಡಿದ್ದು, ಅಲ್ಲಿ ಮನೆ ನಿರ್ಮಿಸಲಾಗಿದೆ. ಉಳಿದ 10 ಅರ್ಜಿದಾರರಿಗೂ ಮುಂದಿನ ದಿನಗಳಲ್ಲಿ ಮನೆ ನಿರ್ಮಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
ಉರೂಸ್ ಕಾರ್ಯಕ್ರಮವು ಸಯ್ಯದ್ ಕೆ.ಎಸ್. ಆಟಕೋಯ ತಂಬಳ್ ಕುಂಬೋಳ್ ನೇತೃತ್ವದಲ್ಲಿ ಆರಂಭವಾಗಲಿದೆ. ಏಪ್ರಿಲ್ 25ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸಯ್ಯದ್ ಅಹ್ಮದ್ ಪೂಕೋಯ ತಂಬಳ್ ದುಆ ನೆರವೇರಿಸಲಿದ್ದಾರೆ. ಸಯ್ಯದ್ ಕೆ.ಎಸ್. ಆಟಕೋಯ ತಂಬಳ್ ಕುಂಬೋಳ್ ಅಧ್ಯಕ್ಷತೆ ವಹಿಸಲಿದ್ದು, ಡಾ. ಅಬ್ದುಲ್ ಹಕೀಂ ಆಝರಿ ಕಾಂತಪುರಂ ಉದ್ಘಾಟಿಸಲಿದ್ದಾರೆ. ಮುಳ್ಳೂರುಕೆರೆ ಮಹಮ್ಮದ್ ಆಲಿ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ.
ಏಪ್ರಿಲ್ 26ರಂದು ಬೆಳಗ್ಗೆ ಸಯ್ಯದ್ ಅಹ್ಮದ್ ಮುಕ್ತಾರ್ ತಂಬಳ್ ಕುಂಬೋಳ್ ನೇತೃತ್ವದಲ್ಲಿ ‘ಜಲಾಲಿಯಾ ಮಜ್ಲಿಸ್’ ನಡೆಯಲಿದೆ. ಅದೇ ದಿನ ಬೆಳಗ್ಗೆ 9ರಿಂದ ಮಗ್ರಿಬ್ ತನಕ ಸರ್ವಧರ್ಮೀಯರಿಗೆ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ಅಧ್ಯಕ್ಷ ಪಿ.ಬಿ. ಇಕ್ಟಾಲ್ ಹಾಜಿ, ಮುದರ್ರಿಸ್ ಹಾಫಿಲ್ ಉವೈಸ್ ಹಿಸಾಮಿ, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಬೀಬಿ ಅಬ್ದುಲ್ ರಹಿಮಾನ್ ಹಾಜಿ ಹಾಗೂ ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ ಉಪಸ್ಥಿತರಿದ್ದರು.














