ದೆಹಲಿ: ಮದ್ಯನೀತಿ ಹಗರಣದಲ್ಲಿ ಜೈಲುಪಾಲಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.


ಕೇಜ್ರಿವಾಲ್ ಕಚೇರಿಗೆ ತೆರಳಿ ಕಡತಗಳಿಗೆ ಸಹಿ ಮಾಡುವಂತಿಲ್ಲ, ಬಹಿರಂಗ ಪ್ರಚಾರ ಮಾಡುವಂತಿಲ್ಲ, ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಕಚೇರಿಗೆ ಹೋಗುವಂತಿಲ್ಲ ಮತ್ತು ಅವರು ಯಾವುದೇ ಸಾಕ್ಷಿಗಳೊಂದಿಗೆ ಮಾತನಾಡುವುದಿಲ್ಲ. ಅಗತ್ಯ ಬಿದ್ದರೆ ವಿಚಾರಣಾ ನ್ಯಾಯಾಲಯಕ್ಕೂ ಹಾಜರಾಗಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ ಶುಕ್ರವಾರ ತನ್ನ ಆದೇಶ ಪ್ರಕಟಿಸಿದೆ.


ಈ ಜಾಮೀನು ಅವಧಿಯಲ್ಲಿ ಮದ್ಯನೀತಿ ಹಗರಣ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ. ಇಡಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಗೆ ನೀಡಿರುವ ಮಧ್ಯಂತರ ಜಾಮೀನಿಗೆ ಅನ್ವಯವಾಗುವ ಷರತ್ತುಗಳು ಸಿಬಿಐ ಪ್ರಕರಣದಲ್ಲಿಯೂ ಅನ್ವಯವಾಗುತ್ತವೆ.


ಇದಲ್ಲದೆ 50,000ರೂ. ಬಾಂಡ್, ಈ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡಬಾರದು ಮತ್ತು ಸಾಕ್ಷಿಗಳೊಂದಿಗೆ ಮಾತುಕತೆ ನಡೆಸಬಾರದು ಎಂದು ಕೇಜ್ರಿವಾಲ್ ಗೆ ಷರತ್ತು ವಿಧಿಸಲಾಗಿದೆ.


ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಮದ್ಯದ ಹಗರಣದಲ್ಲಿ ಬಂಧಿಸಲಾಗಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 10ರಂದು ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದಿದ್ದರು. ಇದಾದ ಬಳಿಕ ಕೇಜ್ರಿವಾಲ್ ಜೂನ್ 2ರಂದು ಶರಣಾಗಿದ್ದರು. ಈ ಪ್ರಕರಣದಲ್ಲಿ ಇಡಿ ಮತ್ತು ಸಿಬಿಐ ಎರಡೂ ತನಿಖೆ ನಡೆಸುತ್ತಿವೆ. ಜುಲೈ 12 ರಂದು ಇಡಿ ಪ್ರಕರಣದಲ್ಲಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದರು. ಇದೀಗ ಸಿಬಿಐ ಪ್ರಕರಣದಲ್ಲೂ ಜಾಮೀನು ಪಡೆದಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!