ಬಂಟ್ವಾಳ: ಮೇ 2ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದ ಪಂಜಾಲ ಕ್ರಾಸ್ ಬಳಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ, ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ KA-20-Z-9585 ಸಂಖ್ಯೆಯ ಬೊಲೇರೋ ವಾಹನವನ್ನು ತಡೆದು ತಪಾಸಣೆ ನಡೆಸಲಾಯಿತು. ಈ ವೇಳೆ ವಾಹನದಲ್ಲಿದ್ದ ಬೊಳಂತೂರು ನಿವಾಸಿಗಳಾದ ಮೊಹಮ್ಮದ್ ನಿಜಾಮುದ್ದೀನ್ (30) ಹಾಗೂ ಸಹೋದರ ಮೊಹಮ್ಮದ್ ಶಾಹೀಂ (19) ಬಂಧಿತರಾಗಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ಅಪರಿಚಿತ ನೈಜೀರಿಯಾ ಮೂಲದ ವ್ಯಕ್ತಿಯಿಂದ ಎಂಡಿಎಂಎ ಖರೀದಿಸಿ ಮಾರಾಟಕ್ಕಾಗಿ ಸಾಗಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ತಪಾಸಣೆಯಲ್ಲಿ ರೂ. 42,30,000 ಮೌಲ್ಯದ 423 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.
ಇದಲ್ಲದೆ, ಆರೋಪಿಗಳ ಬಳಿಯಿದ್ದ ಮೂರು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಬೊಲೇರೋ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಸ್ವಾಧೀನಪಡಿಸಿದ ಸೊತ್ತಿನ ಒಟ್ಟು ಮೌಲ್ಯ ರೂ. 46,25,000 ಆಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 68/2026, ಕಲಂ 8(C) r/w 20(b)(ii)(C) ಎನ್‌ಡಿಪಿಎಸ್ ಕಾಯ್ದೆ, 1985ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.














