ಸುರತ್ಕಲ್: 2014ರಲ್ಲಿ ಕುಳಾಯಿ ಹೊಸಬೆಟ್ಟು ಪ್ರದೇಶದಲ್ಲಿ ನಡೆದಿದ್ದ ದರೋಡೆ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಹುದ್ದೂರ್ ಸಿಂಗ್ ಅಲಿಯಾಸ್ ಬಹುದ್ದೂರ್ ಅಲಿಯಾಸ್ ಬಯ್ಯನನ್ನು ಪೊಲೀಸರು ಬಂಧಿಸಿದ್ದಾರೆ.
2014 ಫೆಬ್ರವರಿ 8ರಂದು ಸಂಜೆ 4ರಿಂದ ರಾತ್ರಿ 8 ಗಂಟೆ ನಡುವೆ, ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ ಸಮೀಪದ ನಿವಾಸಿಯಾದ ಸುಮತಿ ಪ್ರಭು ಅವರನ್ನು ಕುತ್ತಿಗೆಗೆ ಚೂರಿಯಿಂದ ಕೊಲೆ ಮಾಡಿ, ಅವರ ಮೈಮೇಲಿದ್ದ ಸುಮಾರು ರೂ. 3.80 ಲಕ್ಷ ಮೌಲ್ಯದ 192 ಗ್ರಾಂ (24 ಪವನ್) ಬಂಗಾರದ ಒಡವೆಗಳನ್ನು ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಶಿವರಾಮ್, ಬಹುದ್ದೂರ್ ಸಿಂಗ್ ಮತ್ತು ಶಹನ್ವಾಜ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ಬಹುದ್ದೂರ್ ಸಿಂಗ್ ಕಳೆದ 6 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ನ್ಯಾಯಾಲಯದಿಂದ ಬಂಧನ ವಾರಂಟ್ ಹಾಗೂ ಉದ್ಘೋಷಣೆ ಹೊರಡಿಸಲಾಗಿತ್ತು.
ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿ ಗ್ರಾಮದಲ್ಲಿ ಮೇ 3ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಹುದ್ದೂರ್ ಸಿಂಗ್ ಅನ್ನು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
ಈ ಕಾರ್ಯಾಚರಣೆಯನ್ನು ಸುರತ್ಕಲ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಅಜಿತ್ ಮ್ಯಾಥ್ಯು ಹಾಗೂ ಸಿಬ್ಬಂದಿ ಸುನೀಲ್ ಕುಸನಾಳ, ಮೋಹನ್ ನೇತೃತ್ವದಲ್ಲಿ ನಡೆಸಲಾಗಿದ್ದು, ರಾಜೇಂದ್ರ ಪ್ರಸಾದ್ ಮತ್ತು ಸತೀಶ್ ಸಹಕರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!