ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಹೈಡ್ರೊವೀಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇರೆಗೆ ಯುವತಿಯನ್ನು ಬಂಧಿಸಿ, ಸುಮಾರು ₹35 ಲಕ್ಷ ಮೌಲ್ಯದ 1 ಕೆಜಿ 42 ಗ್ರಾಂ ಹೈಡ್ರೊವೀಡ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಬಂಧಿತೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರ ಬನ ನಿವಾಸಿ ಗೌಸ್ ಅವರ ಮಗಳು ಸುಹಾನಾ (21) ಎಂದು ಗುರುತಿಸಲಾಗಿದೆ. ಆಕೆ ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತೆಯ ಬಳಿ ಇದ್ದ ಹೈಡ್ರೊವೀಡ್ ಗಾಂಜಾ, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆನ್ನೈನಿಂದ ಮಾದಕ ವಸ್ತುವನ್ನು ತಂದು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಸಂಪಾದಿಸುವ ಉದ್ದೇಶ ಹೊಂದಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(ಸಿ) ಮತ್ತು 20(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪಣಂಬೂರು ಎಸಿಪಿ ತಂಡ ಹಾಗೂ ಮುಲ್ಕಿ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಆರೋಪಿತೆಯ ವಿರುದ್ಧ ಈ ಹಿಂದೆ ಕಾವೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಪ್ರಕರಣ ದಾಖಲಾಗಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಸ್ಟಮ್ಸ್ ವಿಭಾಗದಲ್ಲಿಯೂ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.














