ಅ ಹಮದಾಬಾದ್‌ನ(Ahmedabad) ಪ್ರಸಿದ್ಧ ಜ್ಯುವೆಲ್ಲರಿ ಶೋರೂಮ್ ಒಂದರಲ್ಲಿ ಸೇಲ್ಸ್‌ವುಮನ್(Saleswoman) ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ನಗುನಗುತ್ತಲೇ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳುವು ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಳ್ಳತನದ ದೃಶ್ಯಗಳು ಅಂಗಡಿಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಭಾರಿ ವೈರಲ್ ಆಗುತ್ತಿವೆ. ಸಿಸಿಟಿವಿ ವಿಡಿಯೋದಲ್ಲಿ ಮಹಿಳೆಯು ಯಾವುದೇ ಭಯವಿಲ್ಲದೆ ಅತ್ಯಂತ ಧೈರ್ಯದಿಂದ ಕಳ್ಳತನ ಮಾಡಿರುವುದು ಕಂಡುಬಂದಿದೆ. ಆಭರಣಗಳ ಟ್ರೇಗಳನ್ನು ಪರಿಶೀಲಿಸುವಂತೆ ನಟಿಸುತ್ತಾ, ಚಿನ್ನದ ಒಡವೆಗಳನ್ನು ಒಂದೊಂದಾಗಿ ಎತ್ತಿ ತನ್ನ ಜೇಬಿಗೆ ಇಳಿಸಿಕೊಳ್ಳುವಾಗಲೂ ಆಕೆಯ ಮುಖದಲ್ಲಿ ನಗು ಇತ್ತು. ಪೊಲೀಸ್ ದೂರಿನ ಪ್ರಕಾರ, ಆರೋಪಿ ಮಹಿಳೆಯು ಕಳೆದ 11 ತಿಂಗಳುಗಳಿಂದ ಅದೇ ಜ್ಯುವೆಲ್ಲರಿ ಶೋರೂಮ್‌ನಲ್ಲಿ ಸೇಲ್ಸ್‌ವುಮನ್ ಆಗಿ ಕೆಲಸ ಮಾಡುತ್ತಿದ್ದಳು.
ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿಯ ನಂಬಿಕೆಯನ್ನು ಗಳಿಸಿ ಈ ಭಾರಿ ದರೋಡೆ ಎಸಗಿದ್ದಾಳೆ. ಶೋರೂಮ್‌ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದ ತಕ್ಷಣ ಮಾಲೀಕರು ಸಿಸಿಟಿವಿ ಪರಿಶೀಲಿಸಿದ್ದಾರೆ. ಮಹಿಳೆಯ ಕೃತ್ಯ ಬಯಲಾದ ಬೆನ್ನಲ್ಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆದಿದೆ.














