ತಿರುವನಂತಪುರಂ, ಸೆ 13: ವಯನಾಡಿನಲ್ಲಿ ಭೂಕುಸಿತದಿಂದ ಇಡೀ ಕುಟುಂಬವನ್ನು ಕಳೆದುಕೊಂಡು ನೋವಿನಲ್ಲಿದ್ದ ಸಂತ್ರಸ್ತೆ ಶೃತಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಶೃತಿ ಭಾವಿ ಪತಿ ಜೆನ್ಸನ್ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕೋಝಿಕ್ಕೋಡ್-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿಯ ವೆಲ್ಲರಂಕುನ್ನು ಬಳಿ ಬಸ್‌ಗೆ ಓಮ್ನಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಅಂಬ್ಲವಾಯಲ್ ಮೂಲದ ಜೆನ್ಸನ್ ತೀವ್ರವಾಗಿ ಗಾಯಗೊಂಡಿದ್ದರು.
ಮಂಗಳವಾರ ಮಧ್ಯಾಹ್ನ ಸುಮಾರು 3:30ಕ್ಕೆ ಅಪಘಾತವಾಗಿ ಜೆನ್ಸನ್ ಗಂಭೀರ ಗಾಯಗೊಂಡಿದ್ದರು. ಮೆಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರಕ್ತಸ್ರಾವ ತಡೆಯಲಾಗದೆ ದಾರುಣವಾಗಿ ಇಂದು ಸಾವನ್ನಪ್ಪಿದ್ದಾರೆ. ವ್ಯಾನ್‌ನಲ್ಲಿದ್ದವರಲ್ಲಿ ಶೃತಿ ಕಾಲಿಗೆ ಮಾತ್ರ ಸಣ್ಣಪುಟ್ಟ ಗಾಯವಾಗಿತ್ತು.
ಕೋಝಿಕ್ಕೋಡ್‌ನಿಂದ ಸುಲ್ತಾನ್ ಬತ್ತೇರಿಗೆ ತೆರಳುತ್ತಿದ್ದ ಬಟರ್‌ಫ್ಲೈ ಹೆಸರಿನ ಬಸ್‌ಗೆ ವ್ಯಾನ್ ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಕಲ್ಪೆಟ್ಟಾದಿಂದ ಬಂದ ಅಗ್ನಿಶಾಮಕ ರಕ್ಷಣಾ ತಂಡಗಳು ಸ್ಥಳೀಯ ನಿವಾಸಿಗಳ ನೆರವಿನಿಂದ ವಾಹನದೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದರು.
ಅಪಘಾತದಲ್ಲಿ ಶೃತಿ ಅವರ ಸೋದರ ಸಂಬಂಧಿ ಲಾವಣ್ಯ ಕೂಡ ಗಾಯಗೊಂಡಿದ್ದಾರೆ. ಈ ಹಿಂದೆ ಇದೇ ಭೂಕುಸಿತದಲ್ಲಿ ಲಾವಣ್ಯ ತನ್ನ ತಂದೆ-ತಾಯಿ ಮತ್ತು ಸಹೋದರನನ್ನು ಕಳೆದುಕೊಂಡಿದ್ದರು. ಈಕೆ ಶೃತಿ ಅವರ ತಂದೆ ಶಿವಣ್ಣರ ಸಹೋದರ ಸಿದ್ದರಾಜು ಮತ್ತು ಅವರ ಪತ್ನಿ ದಿವ್ಯಾ ದಂಪತಿ ಮಗಳು.