ವಿಟ್ಲ: ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕೋಟೆ ಪ್ರದೇಶದಲ್ಲಿ ಪರವಾನಗಿ ಅವಧಿ ಮುಗಿದ ಬಳಿಕವೂ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಆರೋಪದಡಿ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಬಂದ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಬಳಿಕ ಗಣಿಗಾರಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಪರಿಶೀಲಿಸಿದಾಗ, ಗಣಿಗಾರಿಕೆಯ ಪರವಾನಗಿ 2026ರ ಏಪ್ರಿಲ್ 29ರಂದು ಮುಕ್ತಾಯಗೊಂಡಿರುವುದು ದೃಢಪಟ್ಟಿದೆ.
ಆದರೆ, ಪರವಾನಗಿ ಪತ್ರದಲ್ಲಿ ಉಲ್ಲೇಖಿತ ದಿನಾಂಕವನ್ನು 29.05.2026 ಎಂದು ತಿದ್ದುಪಡಿ ಮಾಡಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಬಂಟ್ವಾಳದ ಮೇರಮಜಲು ನಿವಾಸಿ ರಂಜೀತ್ ಕುಮಾರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ.110/2026ರಂತೆ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 318(4), 336(3), ಜೊತೆಗೆ MMDR ಕಾಯ್ದೆ 1957ರ ಕಲಂ 4(1), 4(1A), 21 ಹಾಗೂ KMMC ನಿಯಮ 1994ರ ಕಲಂ 3 ಮತ್ತು 44ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.














