ಮಂಗಳೂರು: ಯಾವುದೇ ದಾಖಲಾತಿಗಳಿಲ್ಲದೆ ಹಾವೇರಿಯಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸರು ಪತ್ತೆಹಚ್ಚಿ ನಾಲ್ವರನ್ನು ಬಂಧಿಸಿದ್ದಾರೆ.

ಮಂಗಳೂರು ಹೈವೇ ಪೆಟ್ರೋಲ್ ಪೊಲೀಸರು ಹಾಗೂ ಕಂಕನಾಡಿ ನಗರ ಠಾಣೆಯ ಸಿಬ್ಬಂದಿ ಮೇ 16ರಂದು ಬೆಳಿಗ್ಗೆ ಜಪ್ಪಿನಮೊಗೆರಿ ಇಂಡಿಯಾನ ಹಾಲ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಈಚರ್ ಲಾರಿಯಲ್ಲಿ ಸುಮಾರು 27 ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ತಕ್ಷಣ ಲಾರಿಯನ್ನು ವಶಕ್ಕೆ ಪಡೆದು ಕೋಣಗಳನ್ನು ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಬೊಮ್ಮನಕಟ್ಟೆಯ ಸಯ್ಯದ್ ಮೆಹಬೂಬ್ ಅಲಿ (28), ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಅರುಣ ಚಂದ್ರಪ್ಪ ಜಾವಳಿ (32), ಹಾಸನ ಜಿಲ್ಲೆಯ ಅರಸಿಕೇರೆ ತಾಲೂಕಿನ ಹಿರಿಯಣ್ಣ ಗೌಡ (46) ಹಾಗೂ ಸುನೀಲ್ ಲಕ್ಷ್ಮಪ್ಪ ಜಾವಳ್ಳಿ (24) ಎಂದು ಗುರುತಿಸಲಾಗಿದೆ.

ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.59/2026ರಂತೆ ಪ್ರಾಣಿ ಹಿಂಸಾ ತಡೆ ಕಾಯ್ದೆ 1960ರ ಸೆಕ್ಷನ್ 11(A), 11(D), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ–2020ರ ಸೆಕ್ಷನ್ 6 ಹಾಗೂ ಬಿಎನ್‌ಎಸ್‌ನ 3(5)ರಡಿ ಪ್ರಕರಣ ದಾಖಲಿಸಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ರಕ್ಷಿಸಲಾದ ಕೋಣಗಳನ್ನು ನ್ಯಾಯಾಲಯದ ಆದೇಶದಂತೆ ಗೋಶಾಲೆಗೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!