ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಶನಿವಾರ ಸಂಜೆ ಸಿಡಿಲು ಬಡಿದ ಘಟನೆ ಸಂಭವಿಸಿದೆ.
ಬೃಹತ್ ಬಂಡೆಯ ಮೇಲಿರುವ ದೇವಸ್ಥಾನದ ಗರ್ಭಗುಡಿಯ ಮೇಲಿನ ಗೋಪುರಕ್ಕೆ ಸಂಜೆ ಸುಮಾರು 5 ಗಂಟೆಯ ವೇಳೆಗೆ ಸಿಡಿಲು ಬಡಿದಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ವೇಳೆ ದೇವಸ್ಥಾನದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಿಡಿಲಿನ ಪರಿಣಾಮ ಗೋಪುರಕ್ಕೆ ಹಾನಿಯಾಗಿದ್ದು, ನಷ್ಟದ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಿದೆ. ಘಟನೆ ಕುರಿತು ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರೇಂದ್ರ ಬಿ. ಅಮೀನ್ ತಿಳಿಸಿದ್ದಾರೆ.














