ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ ಹೆಡ್‌ ಕಾನ್ಸ್‌ಟೇಬಲ್‌ ಅವರ ಮನೆಯಲ್ಲಿ ಕಳ್ಳರು ನುಗ್ಗಿ ಸುಮಾರು ₹15.80 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಗ್ರಾಮದ ಗಾಡಕೋಡಿ ಎಂಬಲ್ಲಿ ಬೆಳಕಿಗೆ ಬಂದಿದೆ.

ಹಾಸನ ಜಿಲ್ಲೆಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯ ಗುಪ್ತವಾರ್ತೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರುಣಾಕರ ಗೌಡ ಪದ್ಮುಂಜ ಅವರ ನಿವಾಸದಲ್ಲಿ ಈ ಕಳವು ನಡೆದಿದೆ. ಕರುಣಾಕರ ಗೌಡರು ಮೂಲ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಪತ್ನಿ ಉದ್ಯೋಗ ನಿಮಿತ್ತ ಬೇರೆ ಊರಿನಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಪತ್ನಿ ತನ್ನ ಕೊಠಡಿಯ ಕಪಾಟಿನಲ್ಲಿ ಚಿನ್ನಾಭರಣಗಳನ್ನು ಇಟ್ಟು ಬೀಗ ಹಾಕಿ, ಅದರ ಕೀಲಿಯನ್ನು ತಮ್ಮೊಂದಿಗೆ ಕೊಂಡೊಯ್ದಿದ್ದರು. ಗುರುವಾರ ರಾತ್ರಿ ಐಪಿಎಲ್‌ ಪಂದ್ಯ ವೀಕ್ಷಿಸಿ ಮಲಗಿದ್ದ ಕರುಣಾಕರ ಗೌಡರು ಶುಕ್ರವಾರ ಬೆಳಿಗ್ಗೆ ಎದ್ದಾಗ ಪತ್ನಿಯ ಕೊಠಡಿಯ ಬೀಗ ಒಡೆದಿರುವುದು ಗಮನಕ್ಕೆ ಬಂದಿದೆ.

ಪರಿಶೀಲಿಸಿದಾಗ ಕಪಾಟಿನ ಬೀಗ ಮುರಿದು ಒಳಗಿದ್ದ ಸುಮಾರು ₹14 ಲಕ್ಷ ಮೌಲ್ಯದ ಹನ್ನೆರಡೂವರೆ ಪವನ್‌ ಚಿನ್ನಾಭರಣ, ₹80 ಸಾವಿರ ಮೌಲ್ಯದ ವಜ್ರಾಭರಣ ಹಾಗೂ ₹1 ಲಕ್ಷ ನಗದು ಕಳವು ಆಗಿರುವುದು ಪತ್ತೆಯಾಗಿದೆ.

ಪೊಲೀಸ್‌ ಸಿಬ್ಬಂದಿಯೊಬ್ಬರು ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲೇ ಮನೆಯೊಳಗೆ ನುಗ್ಗಿ ಕಳ್ಳತನ ನಡೆದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಉಪ ವಿಭಾಗಾಧಿಕಾರಿ ರೋಹಿಣಿ, ಠಾಣಾಧಿಕಾರಿ ಕೌಶಿಕ್ ಬಿ.ಸಿ. ಹಾಗೂ ವೃತ್ತ ನಿರೀಕ್ಷಕ ರವಿ ಬಿ.ಎಸ್. ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!