ಪುತ್ತೂರು: ಪುತ್ತೂರು–ಮಾಣಿ ರಾಜ್ಯ ಹೆದ್ದಾರಿಯ ಮಿತ್ತೂರು ಸಮೀಪದ ಕೂವೆತ್ತಿಲ ಎಂಬಲ್ಲಿ ಮಹಿಂದ್ರಾ ಪಿಕಪ್ ವಾಹನ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಮೇ. 18 ಸೋಮವಾರ ನಡೆದಿದೆ.
ಮೂಲತಃ ಮುಕ್ವೆ ಮಣಿಯ ನಿವಾಸಿಯಾಗಿದ್ದು, ಪ್ರಸ್ತುತ ಕಬಕದಲ್ಲಿ ವಾಸವಿದ್ದ ಸಲೀಂ (52) ಗಾಯಗೊಂಡವರು. ಅವರು ಸೋಫಾ ಹಾಗೂ ವಾಹನಗಳ ಕುಶನ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸಲೀಂ ಅವರು ಮಿತ್ತೂರಿನ ದಾರುಲ್ ಇಸ್ಲಾಂ ಶಿಕ್ಷಣ ಸಂಸ್ಥೆಯ ವಾಹನದ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಬಕ ಕಡೆಯಿಂದ ಮಿತ್ತೂರು ಕಡೆಗೆ ಅತಿವೇಗದಲ್ಲಿ ಬಂದ ಮಹಿಂದ್ರಾ ಪಿಕಪ್ ವಾಹನವು ಸಲೀಂ ಅವರು ಚಲಾಯಿಸುತ್ತಿದ್ದ ಆಕ್ಟಿವಾ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಸಲೀಂ ಅವರು ರಸ್ತೆಗೆ ಬಿದ್ದಿದ್ದು, ಹೆಲ್ಮೆಟ್ ಧರಿಸಿದ್ದರೂ ತಲೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ತಕ್ಷಣ ಗಾಯಾಳುವನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದೇ ವೇಳೆ, ಸ್ಕೂಟರ್‌ಗೆ ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಮಹಿಂದ್ರಾ ಪಿಕಪ್ ರಸ್ತೆ ಬದಿಯ ಗುಡ್ಡದಂತಿದ್ದ ಜಾಗಕ್ಕೆ ನುಗ್ಗಿ ಪಲ್ಟಿ ಹೊಡೆದಿದೆ. ಪಿಕಪ್ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ಬಳಿಕ ಪಿಕಪ್ ವಾಹನದ ನಂಬರ್ ಪ್ಲೇಟ್‌ಗೆ ಕಪ್ಪು ಬಣ್ಣ ಬಳಿದಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.














