ಉಪ್ಪಿನಂಗಡಿ: ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಕಲಹ ಕತ್ತಿ ಹಲ್ಲೆ ಹಾಗೂ ಜೀವಬೆದರಿಕೆ ಆರೋಪದ ಮಟ್ಟಿಗೆ ತಲುಪಿದ ಘಟನೆ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಿಂಡೋವು ಎಂಬಲ್ಲಿ ನಡೆದಿದ್ದು, ಉಭಯಪಕ್ಷಗಳಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರುಗಳು ದಾಖಲಾಗಿವೆ.
ಸುಳ್ಯ ತಾಲೂಕಿನ ಐವರ್ನಾಡು ನಿವಾಸಿ ಅಶೋಕ ಕೆ. (44) ನೀಡಿದ ದೂರಿನ ಪ್ರಕಾರ, ಮೇ 12ರಂದು ರಾತ್ರಿ ಅವರು ತಮ್ಮ ಪತ್ನಿಯ ಮನೆಯಾದ ಬಜತ್ತೂರು ಗ್ರಾಮದ ಕಿಂಡೋವು ಎಂಬಲ್ಲಿ ಪೊನ್ನಕ್ಕ, ಜಾನಕಿ ಹಾಗೂ ಮಾವ ಚೆನ್ನಪ್ಪ ಗೌಡರೊಂದಿಗೆ ಮಾತನಾಡುತ್ತಿದ್ದ ವೇಳೆ, ಪತ್ನಿಯ ತಂಗಿಯ ಪತಿ ರಾಜೇಶ ಎಂಬಾತ ಅಮಲು ಪದಾರ್ಥ ಸೇವಿಸಿದ ಸ್ಥಿತಿಯಲ್ಲಿ ಕತ್ತಿ ಹಿಡಿದು ಬಂದು ಕೌಟುಂಬಿಕ ವಿಚಾರದಲ್ಲಿ ತಕರಾರು ತೆಗೆದಿದ್ದಾನೆ ಎನ್ನಲಾಗಿದೆ.
ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಥಳದಲ್ಲಿದ್ದ ಪೊನ್ನಕ್ಕ, ಜಾನಕಿ ಹಾಗೂ ಅಶೋಕ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಬಳಿಕ ಜೀವಬೆದರಿಕೆ ಒಡ್ಡಿ ತೆರಳಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 75/2026ರಡಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 118(1), 352 ಹಾಗೂ 351(2) ಅನ್ವಯ ಪ್ರಕರಣ ದಾಖಲಾಗಿದೆ.
ಇದಕ್ಕೆ ಪ್ರತಿಯಾಗಿ ರಾಜೇಶ ಕೂಡ ದೂರು ನೀಡಿದ್ದು, ತನ್ನ ಮೇಲೆ ಅಶೋಕ ಹಾಗೂ ಮಾವ ಚೆನ್ನಪ್ಪ ಗೌಡ ಕತ್ತಿಯಿಂದ ಹಲ್ಲೆ ನಡೆಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾನೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 76/2026ರಡಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 352, 109 ಜೊತೆಗೆ 3(5) ಅನ್ವಯ ಪ್ರತಿಪ್ರಕರಣ ದಾಖಲಾಗಿದೆ.
ಘಟನೆ ಕುರಿತು ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.














