ಕಾಯಿಲೆ ಎನ್ನುವುದು ವೈದ್ಯರನ್ನೂ ಬಿಡುವುದಿಲ್ಲ. ರೋಗಿಗಳನ್ನು ಗುಣಪಡಿಸಬೇಕಾದ ವೈದ್ಯನೇ ಆತ್ಮಸ್ಥೈರ್ಯ ಕಳೆದುಕೊಂಡು ದುಡುಕಿನ ನಿರ್ಧಾರ ಕೈಗೊಂಡಿರುವ ಘೋರ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪ್ರತಿಷ್ಠಿತ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಡಾ.ದಿನೇಶ್ ಲಕ್ಷ್ಮಣ ಭಟ್ಕಳ (79) ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯ. ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾಗಿದ್ದು ಹಲವು ವರ್ಷಗಳಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಎಂದಿನಂತೆ ಎದ್ದಿದ್ದ ಡಾ.ದಿನೇಶ್ ಮನೆಯಲ್ಲಿ ಸಹಜವಾಗಿಯೇ ಇದ್ದರು. ಕೆಲ ಸಮಯದಲ್ಲಿಯೇ ಮನೆಯ ಬಾಲ್ಕನಿಗೆ ಹೋದವರು ಅಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಲ್ಕನಿಯಲ್ಲಿ ಗುಂಡಿನ ಸದ್ದು ಕೇಳಿ ಮನೆಯವರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಡಾ.ದಿನೇಶ್ ರಕ್ತದ ಮಡುವಲ್ಲಿ ಬಿದ್ದಿದ್ದರು. ಕೈಯಲ್ಲಿ ಗನ್ ಹಿಡಿದುಕೊಂಡೇ ರಕ್ತದ ಮಡುವಲ್ಲಿ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅನಾರೋಗ್ಯದಿಂದ ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದರು. ಹೀಗಗಿ ಖಿನ್ನತೆಯಿಂದಲೂ ಬಳಲುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹಿರಿಯ ವೈದ್ಯರು ಆತ್ಮಹತ್ಯೆಗೆ ಶರಣಾಗಿರುವುದು ಬೆಳಗಾವಿ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ. ತನಿಖೆಯ ನಂತರವೇ ಸತ್ಯಾಸತ್ಯತೆ ತಿಳಿಯಬೇಕಿದೆ.
ಘಟನಾ ಸ್ಥಳಕ್ಕೆ ಟಿಳಕವಾಡಿ ಠಾಣೆಯ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ತನಿಖೆ ಕೈಗೊಳ್ಳಲಾಗಿದೆ.














