ಬಂಟ್ವಾಳ: ಉಳ್ಳಾಲ ಸಜೀಪನಡು ಗ್ರಾಮದಲ್ಲಿ ಮರದ ಕೊಂಬೆ ತೆರವು ವಿಚಾರವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರಿಗೆ ಗಾಯವಾಗಿದ್ದು, ಇಬ್ಬರು ಪರಸ್ಪರ ದೂರು ನೀಡಿರುವ ಘಟನೆ ನಡೆದಿದೆ.
ಸುರೇಶ್ ರೈ (52) ಅವರ ತಾಯಿಯ ಮನೆಯ ಹಂಚಿಗೆ ಪಕ್ಕದ ಜಮೀನಿನಲ್ಲಿದ್ದ ಮರದ ಕೊಂಬೆ ತಾಗುತ್ತಿದ್ದು, ಅದನ್ನು ತೆರವುಗೊಳಿಸುವಂತೆ ಹಲವಾರು ಬಾರಿ ತಿಳಿಸಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎನ್ನಲಾಗಿದೆ. ಮೇ 23ರಂದು ಸಂಜೆ ಸುರೇಶ್ ರೈ ಅವರು ಕೊಂಬೆ ಕಡಿಯುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಸೋಮನಾಥ ಭಂಡಾರಿ ಅವರು ತೆಂಗಿನಕಾಯಿ ಹಾಗೂ ಕಲ್ಲು ಎಸೆದು ಗಾಯಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂದರ್ಭ ಸುರೇಶ್ ರೈ ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.
ಗಾಯಗೊಂಡ ಸುರೇಶ್ ರೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದೇ ಘಟನೆ ಸಂಬಂಧ ಸುರೇಶ್ ರೈ ಹಾಗೂ ಅವರ ಪತ್ನಿ ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸೋಮನಾಥ ಭಂಡಾರಿ ಕೂಡ ಪ್ರತಿದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.













