ಪುತ್ತೂರು: ಪುಣಚ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯ ನಿವಾಸಿಗಳಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರ ವಿತರಣೆ ವಿಚಾರವಾಗಿ ಬಂಟ್ವಾಳ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆ ಕುರಿತು ಹೊಸ ಬೆಳವಣಿಗೆ ಕಂಡುಬಂದಿದೆ. ಹಕ್ಕುಪತ್ರದ ಫಲಾನುಭವಿಗಳು ಶಾಸಕ ಅಶೋಕ್ ರೈ ಅವರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫಲಾನುಭವಿಗಳ ಪ್ರಕಾರ, ತಾವು ಶಾಸಕ ಅಶೋಕ್ ರೈ ವಿರುದ್ಧ ಅಥವಾ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿಲ್ಲ. ಹಕ್ಕುಪತ್ರದ ಸಮಸ್ಯೆ ಪರಿಹಾರವಾಗಲಿ ಎಂಬ ಉದ್ದೇಶದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ. ಆದರೆ, ಬಿಜೆಪಿಯ ಕೆಲ ನಾಯಕರು ತಮ್ಮ ಸಮಸ್ಯೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
“ನಮ್ಮನ್ನು ಯಾರ ವಿರುದ್ಧವೂ ಪ್ರತಿಭಟನೆ ಮಾಡಲು ನಾವು ಹೋಗಿರಲಿಲ್ಲ. ಬಿಜೆಪಿ ಮುಖಂಡರೇ ನಮ್ಮನ್ನು ಕರೆದುಕೊಂಡು ಹೋಗಿ ಪ್ರತಿಭಟನೆಗೆ ಕೂರಿಸಿದರು. ಹಕ್ಕುಪತ್ರ ನೀಡಿದವರು ಅಶೋಕ್ ರೈ ಅವರೇ ಎಂದು ನಾವು ಮೊದಲೇ ಹೇಳಿದ್ದೆವು. ಆದರೆ, ಹಕ್ಕುಪತ್ರ ಇನ್ನೂ ಕೈಗೆ ಸಿಗದಿರುವುದರಿಂದ ಪ್ರತಿಭಟನೆ ಮಾಡಿದರೆ ಬೇಗ ಸಿಗಬಹುದು ಎಂದು ಹೇಳಿ ನಮ್ಮನ್ನು ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಮಾಡಿದರು” ಎಂದು ಫಲಾನುಭವಿಗಳು ತಿಳಿಸಿದ್ದಾರೆ.
ಇದೇ ವೇಳೆ, ಹಕ್ಕುಪತ್ರ ವಿಚಾರದಲ್ಲಿ ಮಾಜಿ ಶಾಸಕರು ಸೇರಿದಂತೆ ಕೆಲವರು ತಮ್ಮನ್ನು ತಪ್ಪುದಾರಿಗೆ ಎಳೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಅಶೋಕ್ ರೈ, “ಹಕ್ಕುಪತ್ರ ನೀಡುವುದರಿಂದ ನಾನು ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಈ ಹಕ್ಕುಪತ್ರದ ಪ್ರಕ್ರಿಯೆಯನ್ನು ನಾನು ಮುಂದುವರಿಸಿದ್ದೆ. ಎಲ್ಲವೂ ಸರಿಯಾಗಿ ನಡೆಯುತ್ತಿದ್ದ ಸಂದರ್ಭದಲ್ಲೇ ಪ್ರತಿಭಟನೆ ನಡೆಯಿತು. ಈಗ ಈ ವಿಷಯಕ್ಕೆ ಸಂಬಂಧಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಂದಿನ ಬೆಳವಣಿಗೆಗಳು ಕಾನೂನು ಪ್ರಕಾರವೇ ನಡೆಯಲಿವೆ” ಎಂದು ಹೇಳಿದರು.
“ನಿಮ್ಮನ್ನು ಪ್ರತಿಭಟನೆಗೆ ಕರೆದುಕೊಂಡು ಹೋದವರು ಈಗ ನಿಮ್ಮೊಂದಿಗಿದ್ದಾರೆಯೇ ಎಂಬುದನ್ನು ಯೋಚಿಸಿ. ಈ ವಿಚಾರದಲ್ಲಿ ನೀವು ಬಲಿಪಶುಗಳಾಗಿದ್ದೀರಿ. ಮುಂದೆ ಕಾನೂನು ಪ್ರಕಾರ ಏನಾಗಬೇಕೋ ಅದು ಆಗಲಿದೆ” ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!