ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘವು ರೋಟರಿ ಕ್ಲಬ್ ಪುತ್ತೂರು ಸಹಯೋಗದೊಂದಿಗೆ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ೧೦೦೦ಕ್ಕೂ ಮಿಕ್ಕಿ ಅಂಗನವಾಡಿ ಪುಟಾಣಿಗಳಿಗೆ ಉಚಿತವಾಗಿ ಪಾದರಕ್ಷೆ ವಿತರಣೆ ಹಾಗೂ ಸಿಹಿತಿಂಡಿ ವಿತರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದೆ.
೨೦೨೫ನೇ ನವಂಬರ್ ತಿಂಗಳಲ್ಲಿ ಈ ವಿನೂತನ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂಗನವಾಡಿ ಕೇಂದ್ರಗಳಿಂದ ಬಂದ ಅರ್ಜಿಗಳ ಪರಿಶೀಲನೆ ಬಳಿಕ ಹೆಣ್ಮಕ್ಕಳಿಗೆ ಚಪ್ಪಲ್ ಹಾಗೂ ಗಂಡು ಮಕ್ಕಳಿಗೆ ಶೂ ವಿತರಿಸಲು ಯೋಜನೆ ರೂಪಿಸಲಾಯಿತು. ರೋಟರಿ ಕ್ಲಬ್‌ನ ರಫೀಕ್‌ರವರು ಉಚಿತವಾಗಿ ಪಾದರಕ್ಷೆ ನೀಡಿದರು. ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರು ಮಕ್ಕಳಿಗೆ ಅದನ್ನು ವಿತರಿಸುವ ಹಾಗೂ ಸಿಹಿತಿಂಡಿ ನೀಡುವ ಕಾರ್ಯ ಮಾಡಿದ್ದಾರೆ.
ಕರ್ನಾಟಕ ಪತ್ರಕರ್ತರ ಸಂಘವು ಪುತ್ತೂರು ತಾಲೂಕಿನಲ್ಲಿ ಹತ್ತು ಹಲವಾರು ಸಾಮಾಜಿಕ ಮತ್ತು ಶೈಕ್ಷಣಿಕ ಉಪಯೋಗಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ.  ವಿದ್ಯಾರ್ಥಿಗಳಲ್ಲಿ ಪತ್ರಿಕೋದ್ಯಮ, ಸೈಬರ್ ಕ್ರೈಂ ಮುಂತಾದ ವಿಷಯಗಳಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ, ಉಚಿತ ವೈದ್ಯಕೀಯ ಶಿಬಿರ, ಪತ್ರಕರ್ತರ ಸೃಜನಶೀಲತೆಗೆ ಕಾರ್ಯಾಗಾರಗಳು, ಕಾನೂನು ಅರಿವು ಶಿಬಿರ, ಕೆಸರುಗದ್ದೆ ಕ್ರೀಡಾಕೂಟ, ತುಳುನಾಡಿನ ಆಟಿ ತಿಂಗಳ ಮಹತ್ವವನ್ನು ಸಾರುವ ಕಾರ್ಯಕ್ರಮ, ಮಕ್ಕಳಿಗೆ ಪ್ರಬಂಧ, ರಸಪ್ರಶ್ನೆ ಆಯೋಜನೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಸಾಲಿನಲ್ಲಿ ರೋಟರಿ ಕ್ಲಬ್ ಪುತ್ತೂರು ಸಹಯೋಗದಲ್ಲಿ ಅಂಗನವಾಡಿ ಮಕ್ಕಳಿಗೆ ಉಚಿತ ಪಾದರಕ್ಷೆ ವಿತರಣೆ ಕಾರ್ಯಕ್ರಮ ಆಯೋಜಿಸಿದೆ. ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಆಯ್ದ ೪೩ಅಂಗನವಾಡಿ ಕೇಂದ್ರಗಳಿಂದ ಬಂದ ಅರ್ಜಿಯನ್ನು ಪರಿಶೀಲಿಸಿ ೧೦೦೦ ಪುಟಾಣಿಗಳಿಗೆ ಪಾದರಕ್ಷೆ ವಿತರಿಸಲಾಗಿದೆ.
ಅಂಗನವಾಡಿ ಕೇಂದ್ರಗಳಿಂದ ಉತ್ತಮ ಸ್ಪಂದನೆ: ಮಕ್ಕಳಿಗೆ ಪಾದರಕ್ಷೆ ವಿತರಣೆ ಕಾರ್ಯಕ್ರಮಕ್ಕೆ ಅಂಗನವಾಡಿ ಕೇಂದ್ರಗಳಿಂದ ಉತ್ತಮ ಸ್ಪಂದನೆ ದೊರೆತಿದೆ. ಹೊಸ ಶೂ, ಹೊಸ ಚಪ್ಪಲ್‌ನೊಂದಿಗೆ ಪುಟಾಣಿಗಳೂ ಸಂತೋಷಭರಿತರಾಗಿದ್ದಾರೆ. ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು ಈ ಕಾರ್ಯಕ್ರಮವನ್ನು ಅಭಿಯಾನ ರೀತಿಯಲ್ಲಿ ಸಂಯೋಜಿಸಿ ಸುಮಾರು ೬ ತಿಂಗಳ ಅವಧಿಯಲ್ಲಿ ೧೦೦೦ ಪುಟಾಣಿಗಳಿಗೆ ಪಾದರಕ್ಷೆ ವಿತರಿಸುವ ಕಾರ್ಯ ಮಾಡಿದ್ದಾರೆ.
ಈಶ್ವರಮಂಗಲ, ಮೈರೋಳು, ಬೆದ್ರಾಡಿ, ಮೇನಾಲ, ನೆಲ್ಲಿತ್ತಡ್ಕ, ಪಳ್ಳತ್ತೂರು, ಕರ್ನೂರು, ತಿಂಗಳಾಡಿ, ತೆಗ್ಗು, ಕಟ್ಟಜೀರು, ಕಟ್ಟತ್ತಾರು, ಕೈಕಂಬ, ಮಾಡಾವು, ದರ್ಬೆ ತಿಂಗಳಾಡಿ, ಪರ್ಲಡ್ಕ, ಬಲ್ನಾಡು, ಬಪ್ಪಳಿಗೆ, ಸಂಜಯನಗರ, ಕರ್ಮಲ, ನೆಲ್ಲಿಕಟ್ಟೆ, ಬಾಲವನ, ಬೆದ್ರಾಳ, ಸಾಲ್ಮರ, ಬನ್ನೂರುಕಟ್ಟೆ, ಮುಕ್ರಂಪಾಡಿ, ಕೊಂಬೆಟ್ಟು, ಉಜ್ರುಪಾದೆ, ಸಂಪ್ಯ, ಮಲಾರ್, ಸಂಟ್ಯಾರ್, ಕುಟ್ಟಿನೋಪಿನಡ್ಕ, ಕೊಯಿಲತ್ತಡ್ಕ, ಕುಂಬ್ರ, ಮಿತ್ತಡ್ಕ, ಪಾರ, ವಿದ್ಯಾಪುರ ಕಬಕ, ಕಂಬಳತ್ತಡ್ಡ, ತೆಂಕಿಲ, ಕುಂಜೂರುಪಂಜ, ಮೂಡಾಯಿಬೆಟ್ಟು ಪುಣಚ, ರೋಟರಿಪುರ, ಕೊಳ್ನಾಡು ಸಾಲೆತ್ತೂರು, ಮೊಟ್ಟೆತ್ತಡ್ಕ ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಗೆ ಪಾದರಕ್ಷೆ ವಿತರಿಸಲಾಗಿದೆ.
ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ತಾಲೂಕು ಅಧ್ಯಕ್ಷ  ಶ್ರೀಧರ ರೈ ಕೋಡಂಬು, ಕಾರ್ಯದರ್ಶಿ ಆದಿತ್ಯ ಈಶ್ವರಮಂಗಲ, ಉಪಾಧ್ಯಕ್ಷ ಶಿವಕುಮಾರ್ ಈಶ್ವರಮಂಗಲ,  ಕೋಶಾಧಿಕಾರಿ ಅಕ್ಷತಾ, ನ್ಯಾಷನಲ್ ಕೌನ್ಸಿಲ್ ಮೆಂಬರ್ ಉಮೇಶ್ ಮಿತ್ತಡ್ಕ, ಸಂಘಟನಾ ಕಾರ್ಯದರ್ಶಿ ಅಶ್ವಥ್ ಶೆಟ್ಟಿ, ಜೊತೆ ಕಾರ್ಯದರ್ಶಿ ಲೋಕಯ್ಯ ಗೌಡ ಸಂಪ್ಯಾಡಿ ಹಾಗೂ ಸದಸ್ಯರು ಈ ಅಭಿಯಾನದಲ್ಲಿ ಸಹಕರಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!