ಪುತ್ತೂರು, ಜೂನ್ 17: ಕಬಕದ ವಿದ್ಯಾಪುರದಲ್ಲಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ವಕೀಲ ಆಶಿಕ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಅರ್ಜಿಯ ಅಂತಿಮ ತೀರ್ಪು ಬರುವವರೆಗೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪುತ್ತೂರು ಉಪವಿಭಾಗದ ಪೊಲೀಸ್ ಅಧಿಕಾರಿಗೆ (ಡಿವೈಎಸ್ಪಿ) ನಿರ್ದೇಶನ ನೀಡಿದೆ.
ಕಬಕ ನಿವಾಸಿ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 70/2026ರ ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 115(2), 352, 351(2), 49 ಹಾಗೂ 3(5) ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಅರ್ಜಿದಾರರ ಪರವಾಗಿ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಿ. ಜಗನಾಥ ರೈ, ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಹಾಗೂ ವಕೀಲರಾದ ಮುಸ್ತಫಾ ಕಡಬ, ರೆಹಮಾನ್ ಹಿರೇಬಂಡಾಡಿ, ರಮೀಜ್ ಸೇರಿದಂತೆ ಇತರರು ನ್ಯಾಯಾಲಯದಲ್ಲಿ ಹಾಜರಾಗಿ ವಾದ ಮಂಡಿಸಿದರು. ಆಶಿಕ್ ಅವರೇ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಪ್ರತೀಕಾರದ ಉದ್ದೇಶದಿಂದ ಪ್ರತಿದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು, ಮುಂದಿನ ಆದೇಶದವರೆಗೆ ಆಶಿಕ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಿದೆ. ಜೊತೆಗೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಜೂನ್ 18ರಂದು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.
ಇದೇ ವೇಳೆ, ವಕೀಲರ ವಿರುದ್ಧ ಪ್ರಕರಣ ದಾಖಲಿಸುವ ಸಂದರ್ಭಗಳಲ್ಲಿ ಸಂಬಂಧಿತ ಬಾರ್ ಅಸೋಸಿಯೇಷನ್‌ಗೆ ಮಾಹಿತಿ ನೀಡುವುದು ಹಾಗೂ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪಾಲಿಸುವ ಕುರಿತು ನ್ಯಾಯಾಲಯ ಮಹತ್ವದ ನಿರ್ದೇಶನ ನೀಡಿದೆ ಎಂದು ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ







