ಪುತ್ತೂರು, ಜೂ.17: ಪುತ್ತೂರು–ಉಪ್ಪಿನಂಗಡಿ ರಸ್ತೆಯ ಹಾರಾಡಿ ರೈಲ್ವೆ ಸೇತುವೆ ಕೆಳಭಾಗದಲ್ಲಿ ಕಾಂಕ್ರೀಟಿಕರಣ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ, ಆ ರಸ್ತೆಯಲ್ಲಿ ಜೂನ್ 18ರಿಂದ ಜುಲೈ 18ರವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದರ್ಶನ್ ಎಚ್.ವಿ. ಆದೇಶ ಹೊರಡಿಸಿದ್ದಾರೆ.
ಪುತ್ತೂರು–ಉಪ್ಪಿನಂಗಡಿ ರಸ್ತೆಯ ಬೊಳುವಾರುದಿಂದ ಸೇಡಿಯಾಪುವರೆಗೆ ಚತುಷ್ಪಥ ಕಾಂಕ್ರೀಟಿಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಹಾರಾಡಿ ರೈಲ್ವೆ ಸೇತುವೆಯ ಕೆಳಭಾಗದ ರಸ್ತೆ ಕಿರಿದಾಗಿರುವುದರಿಂದ ದ್ವಿಮುಖ ವಾಹನ ಸಂಚಾರ ಸಾಧ್ಯವಿಲ್ಲ. ಕಾಮಗಾರಿ ಸುಗಮವಾಗಿ ನಡೆಯಲು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
ಬದಲಿ ಮಾರ್ಗಗಳು
▶ ಪುತ್ತೂರಿನಿಂದ ಉಪ್ಪಿನಂಗಡಿಗೆ ತೆರಳುವ ವಾಹನಗಳು:
ಪುತ್ತೂರು ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆ ಮೂಲಕ ಕೋಟಿಚ್ಚಾ ಹಾಲ್ ಮುಖಾಂತರ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸಬೇಕು.
▶ ಉಪ್ಪಿನಂಗಡಿಯಿಂದ ಪುತ್ತೂರಿಗೆ ಬರುವ ವಾಹನಗಳು:
ಕೋಟಿಚ್ಚಾ ಹಾಲ್ ಮೂಲಕ ಎಪಿಎಂಸಿ ರಸ್ತೆಯಾಗಿ ಪುತ್ತೂರು ಮುಖ್ಯ ರಸ್ತೆಯನ್ನು ಸಂಪರ್ಕಿಸಬೇಕು.
▶ ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುವ ವಾಹನಗಳು:
ಪಡೀಲ್ ಜಂಕ್ಷನ್ ಮೂಲಕ ನಗರ ಮಾರ್ಗದಲ್ಲಿ ಸಂಚರಿಸಬೇಕು.
ಸಂಚಾರ ಬದಲಾವಣೆಗೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಅಳವಡಿಸಿ, ವಾಹನ ಸಂಚಾರ ನಿಯಂತ್ರಣಕ್ಕೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳು ಮೋಟಾರು ವಾಹನ ಕಾಯ್ದೆ 1988ರ ಸೆಕ್ಷನ್ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಾವಳಿ 1989ರ ನಿಯಮ 221(ಎ)(5)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ.







