ವಿಟ್ಲ, ಜೂನ್ 17: ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 24/2020 ಹಾಗೂ 34/2022ರ ಕಳ್ಳತನ ಪ್ರಕರಣಗಳಲ್ಲಿ (ಕಲಂ 457, 380 ಐಪಿಸಿ) ಆರೋಪಿಯಾಗಿರುವ ಪುತ್ತೂರಿನ ಚಿಕ್ಕಮುಡ್ನೂರು ನಿವಾಸಿ ಮೊಹಮ್ಮದ್ ಸಲಾಂ @ ಕೆ.ಎಂ. ಸಲಾಂ @ ಡಾಲರ್ ಸಲಾಂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.
ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಜೂನ್ 16ರಂದು ಪುತ್ತೂರು ರೈಲ್ವೆ ನಿಲ್ದಾಣದ ಸಮೀಪ ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇದಲ್ಲದೆ, ಆರೋಪಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 45/2023ರಡಿ ಕಲಂ 353, 332 ಮತ್ತು 504 ಐಪಿಸಿ ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಅದರಲ್ಲಿ ಕೂಡ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ವಾರಂಟ್ ಜಾರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.







