ಪುತ್ತೂರು: ಇ-ಫ್ರೆಂಡ್ಸ್ ಪುತ್ತೂರು ಹಾಗೂ ಇ-ಫೌಂಡೇಶನ್ ಇಂಡಿಯಾ (ರಿ.) ವತಿಯಿಂದ ಶೈಕ್ಷಣಿಕ ನೆರವಿನ ಉದ್ದೇಶದಿಂದ ‘ಸ್ಕೂಲ್ ಚಲೋ’ ಕಾರ್ಯಕ್ರಮವನ್ನು ಸೋಮವಾರ ಸಂಸ್ಥೆಯ ಕಾರುಣ್ಯ ಕಚೇರಿಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಅರ್ಹ 100 ಕುಟುಂಬಗಳ ಮಕ್ಕಳಿಗೆ ಶಾಲಾ ಶಿಕ್ಷಣಕ್ಕೆ ಅಗತ್ಯವಾದ ಪುಸ್ತಕಗಳು, ಶಾಲಾ ಬ್ಯಾಗ್‌ಗಳು ಹಾಗೂ ಇತರೆ ಸ್ಟೇಷನರಿ ಸಾಮಗ್ರಿಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂತಾರಾಷ್ಟ್ರೀಯ ಮೋಟಿವೇಶನ್ ಟ್ರೈನರ್ ಹಾಗೂ ಹೋಪ್ ಫೌಂಡೇಶನ್ ಮಂಗಳೂರು ಸಂಸ್ಥಾಪಕ ಸೈಫ್ ಸುಲ್ತಾನ್ ಮಾತನಾಡಿ, “ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವುದು ಸಮಾಜದ ಜವಾಬ್ದಾರಿ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಕುಟುಂಬ, ಸಮುದಾಯ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಮುಂದಿನ ದಿನಗಳಲ್ಲಿ ತಾವೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮೂಲಕ ಇತರರಿಗೆ ಮಾದರಿಯಾಗಬೇಕು” ಎಂದು ಹೇಳಿದರು.
ಶಿಕ್ಷಣ ತಜ್ಞ ರಜಾಕ್ ಮಾಸ್ಟರ್ ಅನಂತಾಡಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆಗೆ ಇರುವ ಅವಕಾಶಗಳು ಮತ್ತು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಉದಾಹರಣೆಗಳೊಂದಿಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಅನ್ಸಾರುದ್ದೀನ್ ಜಮಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಜಾದ್ ಮಾತನಾಡಿ, ಇ-ಫ್ರೆಂಡ್ಸ್ ಸಂಸ್ಥೆ ಇದುವರೆಗೆ ಕೈಗೊಂಡಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಹೋಪ್ ಫೌಂಡೇಶನ್‌ನ ಮುನಾಫಿಲ್ ಮಂಗಳೂರು ಹಾಗೂ ಇಹ್ಸಾನ್ ಫೌಂಡೇಶನ್ ಅಧ್ಯಕ್ಷ ಆರ್.ಪಿ. ರಜಾಕ್ ಉಪಸ್ಥಿತರಿದ್ದರು.
ಇ-ಫ್ರೆಂಡ್ಸ್ ಅಧ್ಯಕ್ಷ ಆರಿಫ್ ಸಾಲ್ಮರ ಹಾಗೂ ಕೋಶಾಧಿಕಾರಿ ಹೈದರ್ ಚೋಯ್ಸ್ ಅತಿಥಿಗಳನ್ನು ಸ್ವಾಗತಿಸಿದರು. ಸದಸ್ಯರಾದ ಇಮ್ತಿಯಾಜ್, ಶಾಕೀರ್, ಇಜಾಜ್ ಮತ್ತು ರಿಯಾಜ್ ಝಾರ್ ಕಾರ್ಯಕ್ರಮ ನಿರೂಪಿಸಿದರು.







