ಚಿಕ್ಕಬಳ್ಳಾಪುರ: ಪ್ರೇಮ ವಿವಾಹ ಮಾಡಿಕೊಂಡು ಬಳಿಕ ಕುಟುಂಬದ ಒತ್ತಡಕ್ಕೆ ಮಣಿದು ಪೊಲೀಸ್ ಠಾಣೆಯಲ್ಲೇ ತಾಳಿ ಕಿತ್ತುಹಾಕಿದ್ದ ಯುವತಿಯೊಬ್ಬಳು, ಆರು ತಿಂಗಳ ಬಳಿಕ ಮತ್ತೆ ಅದೇ ಯುವಕನೊಂದಿಗೆ ಮರುಮದುವೆಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ನಗರದ ಕಂದವಾರ ಬಡಾವಣೆಯ ನಿವಾಸಿಯಾದ ಕೀರ್ತನಾ ಹಾಗೂ ಸಾಯಿ ಸಂದೀಪ್ ಪರಸ್ಪರ ಪ್ರೀತಿಸುತ್ತಿದ್ದರು. ಕೀರ್ತನಾ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದು, ಸಂದೀಪ್ ಪೇಂಟಿಂಗ್ ಕೆಲಸ ಮಾಡುತ್ತಿರುವ ಯುವಕ. ಇಬ್ಬರೂ ಮನೆಯವರ ಅನುಮತಿ ಇಲ್ಲದೆ ಸುಮಾರು ಆರು ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದರು.
ಆದರೆ, ಕುಟುಂಬಗಳ ವಿರೋಧ ಹಾಗೂ ಸಾಮಾಜಿಕ ಹಿನ್ನೆಲೆಯ ಭಿನ್ನತೆಯ ಕಾರಣದಿಂದ ಯುವತಿಯ ಪೋಷಕರು ಮದುವೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಜನವರಿ 6ರಂದು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದ ಮಾತುಕತೆಯ ವೇಳೆ ಕೀರ್ತನಾ ತಾಳಿ ಕಿತ್ತುಹಾಕಿ ಪೋಷಕರೊಂದಿಗೆ ಮನೆಗೆ ಮರಳಿದ್ದರು.
ಇದರಿಂದ ಇಬ್ಬರ ಸಂಬಂಧ ಅಂತ್ಯಗೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ, ಸಂದೀಪ್ ಮೇಲಿನ ಪ್ರೀತಿ ಕಡಿಮೆಯಾಗದ ಕೀರ್ತನಾ ಇತ್ತೀಚೆಗೆ ಅವರನ್ನು ಸಂಪರ್ಕಿಸಿ ಭೇಟಿ ಆಗಿದ್ದಾರೆ. ಬಳಿಕ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಸಂದೀಪ್ ಮತ್ತೊಮ್ಮೆ ಕೀರ್ತನಾಳಿಗೆ ತಾಳಿ ಕಟ್ಟಿದ್ದು, ಇಬ್ಬರೂ ಮರುಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮರುಮದುವೆಯ ವಿಡಿಯೊವನ್ನು ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಕುಟುಂಬದವರಿಂದ ಜೀವ ಬೆದರಿಕೆ ಇರುವ ಕಾರಣ ಚಿಕ್ಕಬಳ್ಳಾಪುರ ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದ್ದು, ಪ್ರೇಮ, ಕುಟುಂಬದ ಒತ್ತಡ ಮತ್ತು ಸಾಮಾಜಿಕ ಭಿನ್ನತೆಗಳ ಕುರಿತಾಗಿ ಮತ್ತೆ ಚರ್ಚೆ ಆರಂಭವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!