ಮಂಗಳೂರು: ಮಂಗಳವಾರ ಬೆಳಗ್ಗಿನಿಂದ ನಾಪತ್ತೆಯಾಗಿದ್ದ ಕೊಣಾಜೆ ಸಮೀಪದ ಉರುಮಣೆ ನಿವಾಸಿ ಮುಹಮ್ಮದ್ ಅಶ್ರಫ್ ಮಾಲಿಕಿ (45) ಅವರ ಮೃತದೇಹ ಬುಧವಾರ ಸಂಜೆ ಗುರುಪುರ ಹೊಳೆಯಲ್ಲಿ ಪತ್ತೆಯಾಯಿತು.ಅಶ್ರಫ್ ಅವರು ಮಂಗಳವಾರ ಬೆಳಗ್ಗೆ ಮನೆಯಿಂದ ಹೊರಟಿದ್ದು, ರಾತ್ರಿ ಮನೆಗೆ ವಾಪಸ್ ಬಾರದೆ ಇದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.ಬುಧವಾರ ಬೆಳಗ್ಗೆ ಗುರುಪುರ ಸೇತುವೆ ಸಮೀಪ ದ್ವಿಚಕ್ರ ವಾಹನ ಅನಾಥವಾಗಿ ನಿಂತಿರುವುದನ್ನು ಗಮನಿಸಿದ ಸಾರ್ವಜನಿಕರು ಅದರ ಚಿತ್ರ ಹಾಗೂ ವಾಹನದ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ವಾಹನವನ್ನು ಅಶ್ರಫ್ ಅವರದ್ದೆಂದು ಗುರುತಿಸಿದರು.ಬಳಿಕ ನದಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಬುಧವಾರ ಸಂಜೆ ಅವರ ಮೃತದೇಹ ಪತ್ತೆಯಾಯಿತು.ಅಶ್ರಫ್ ಅವರು ಇತ್ತೀಚೆಗೆ ಹೊಸ ಮನೆ ನಿರ್ಮಿಸಿಕೊಂಡಿದ್ದು, ಉದ್ಯೋಗ ಕಳೆದುಕೊಂಡ ಬಳಿಕ ಕೆಲ ದಿನಗಳಿಂದ ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ.ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.











