ಬೆಂಗಳೂರು: ನಿಫಾ ವೈರಸ್ ಗೆ ಬಲಿಯಾದ ವಿದ್ಯಾರ್ಥಿಯ ಅಂತ್ಯಸಂಸ್ಕಾರಕ್ಕೆ ಇಲ್ಲಿಂದ ಕೆಲವರು ಕೇರಳಕ್ಕೆ ಹೋಗಿದ್ದಾರೆ. ಕೇರಳಕ್ಕೆ ಹೋಗಿರುವ 25 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಿಫಾ ವೈರಸ್ ಗೆ ಕೇರಳ ಮೂಲದ ವಿದ್ಯಾರ್ಥಿ ಬಲಿ ಆಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ವೈರಸ್ ಭೀತಿ ಎದುರಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇರಳ ಮೂಲದ ವಿದ್ಯಾರ್ಥಿ ನಿಫಾ ವೈರಸ್ಗೆ ಬಲಿಯಾಗಿದ್ದಾರೆ. ಸೈಕಾಲಜಿ ಸ್ಟೂಡೆಂಟ್ ಆಗಿದ್ದ ಅವರ ಅಂತ್ಯ ಸಂಸ್ಕಾರಕ್ಕೆ ಇಲ್ಲಿಂದ ಕೆಲವರು ಕೇರಳಕ್ಕೆ ಹೋಗಿದ್ದರು. ಅವರ ಮೇಲೂ ನಿಗಾ ವಹಿಸಲಾಗಿದೆ. ಕೇರಳದಲ್ಲೂ ಇದರ ಬಗ್ಗೆ ನಿಗಾ ವಹಿಸಲಾಗಿದೆ. ಯರ್ಯಾರು ಕೇರಳಕ್ಕೆ ಹೋಗಿದ್ದರೋ ಅವರ ಮೇಲೆ ನಿಗಾ ವಹಿಸಲಾಗುತ್ತಿದೆ. 25 ಜನರನ್ನು ಟ್ರಾಕ್ ಮಾಡಲಾಗುತ್ತಿದೆ. ಅವರಿಗೆ ಯಾವ್ಯಾವ ಲಕ್ಷಣಗಳಿವೆ ಎಂದು ನೋಡುತ್ತಿದ್ದೇವೆ. ಮಂಗಳವಾರ ಅಥವಾ ಬುಧವಾರ ರಿಪೋರ್ಟ್ ಬರಬಹುದು ಎಂದರು.
ಮುನಿರತ್ನ ಅರೆಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುನಿರತ್ನ ವಿಚಾರವೇ ಬೇರೆ, ಚೆನ್ನಾರೆಡ್ಡಿ ವಿಚಾರವೇ ಬೇರೆ. ಅತ್ಯಂತ ಕೆಳಮಟ್ಟದ ನಿಂದಿಸುವ ಕೆಲಸ ಅವರು ಮಾಡಿದ್ದಾರೆ. ಮಹಿಳೆಯವರ ಬಗ್ಗೆ ಇರುವ ಧೋರಣೆ ತೋರಿಸಿದ್ದಾರೆ. ಅಂಥವರ ಬಗ್ಗೆ ಕ್ರಮ ಆಗಬೇಕಾಗುತ್ತದೆ. ಚೆನ್ನಾರೆಡ್ಡಿ ಅವರ ವಿಚಾರವೇ ಬೇರೆ. ಇನ್ನು ಸಬ್ ಇನ್ಸ್ಪೆಕ್ಟರ್ ಪರುಶುರಾಮ್ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಆದರೆ ಬಿಜೆಪಿ ಅವರು ದಾರಿ ತಪ್ಪಿಸುತ್ತಿದ್ದಾರೆ. ಹಾಗೆ ಮಾಡಬಾರದು. ಯಾಕಂದ್ರೆ ಇದು ಪಕ್ಷದ ವಿಚಾರ ಅಲ್ಲ. ಇದು ಜಾತಿ ನಿಂದನೆ, ಹೆದರಿಸೋದು, ಮಹಿಳೆಯರನ್ನ ನಿಂದಿಸೋದು ಇವೆಲ್ಲ ಇದೆ. ಬಿಜೆಪಿಯವರು ಇದರ ಪರ ಮಾತನಾಡಬಾರದು ಎಂದು ಹೇಳಿದರು