ಮಂಗಳೂರು: ಸುಮಾರು 10 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ಪ್ರಕರಣದ ಆರೋಪಿಯನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.ಕುದ್ರೋಳಿ ಕರ್ಬಲ ರಸ್ತೆಯ ಇಂಪೀರಿಯಲ್ ಹೋಟೆಲ್ ನಿವಾಸಿ ಹೈದರ್ ಅವರ ಪುತ್ರ ನೌಫಾಲ್ (34) ಬಂಧಿತ ಆರೋಪಿಯಾಗಿದ್ದಾನೆ.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ದಾಖಲಾಗಿದ್ದ ಅ.ಕ್ರ. 184/2016 ಪ್ರಕರಣದಲ್ಲಿ ನೌಫಾಲ್ ವಿರುದ್ಧ ಐಪಿಸಿ ಕಲಂ 143, 147, 341, 353, 504, 506 ಜೊತೆಗೆ 149ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಅಬ್ಸ್ಕಾಂಡಿಂಗ್ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.ಸುಮಾರು 10 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಇರುವಿಕೆಯ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಮಾಹಿತಿ ಸಂಗ್ರಹಿಸಿ ಪತ್ತೆಹಚ್ಚಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.











