ಬೆಳ್ತಂಗಡಿ: ನೆರಿಯ ಗ್ರಾಮದ ಮುಚ್ಚಳ್ಳಿ ಎಂಬಲ್ಲಿ ಕಾಡುಹಂದಿಯನ್ನು ಬೇಟೆಯಾಡಿ, ಮಾಂಸ ಮಾಡಿ ದಾಸ್ತಾನಿಟ್ಟಿದ್ದ ಆರೋಪದ ಮೇರೆಗೆ ಓರ್ವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.ನೆರಿಯ ಗ್ರಾಮದ ಮುಚ್ಚಳ್ಳಿ ಮನೆ ನಿವಾಸಿ ಕುಕ್ಕಪ್ಪ ಗೌಡ ಅವರ ಪುತ್ರ ಸುರೇಶ್ ಎಂ.ಕೆ. (38) ಬಂಧಿತ ಆರೋಪಿ.ಸೆ.20ರಂದು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಕಾಡುಹಂದಿ ಬೇಟೆಯಾಡಿರುವುದು ಪತ್ತೆಯಾಗಿದೆ. ಬೇಟೆಗೆ ಬಳಸಿದ್ದ ಕೋವಿ, ಕತ್ತಿ ಹಾಗೂ ಇತರ ಪರಿಕರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ. ದೇವಾಡಿಗ ಅವರ ಮಾರ್ಗದರ್ಶನದಲ್ಲಿ ನೆರಿಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರವಿಚಂದ್ರ ಅವರು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.











