ಪುತ್ತೂರು: ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ಯುವಕನೊಬ್ಬ ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಬೆಳಕಿಗೆ ಬಂದಿದೆ.ಪಡುಬಿದ್ರಿ ನಿವಾಸಿ ಸುಂದರ ಪೂಜಾರಿ ಅವರ ಪುತ್ರ ವಿನೇಶ್ ಮೃತಪಟ್ಟವರು.

ಅವರು ಕಳೆದ ಕೆಲ ತಿಂಗಳಿಂದ ಪುತ್ತೂರಿನ ದರ್ಬೆಯ ಜಿನಸು ಸಾಮಗ್ರಿಗಳ ಮಳಿಗೆಯೊಂದರಲ್ಲಿ ಆಡಿಟಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಮಂಗಳೂರಿನ ಆಡಿಟಿಂಗ್ ಕಂಪೆನಿಯೊಂದು ಅವರನ್ನು ಗುತ್ತಿಗೆ ಆಧಾರದಲ್ಲಿ ಇಲ್ಲಿಗೆ ನೇಮಿಸಿತ್ತು ಎನ್ನಲಾಗಿದೆ.ಮಂಗಳವಾರ (ಅ.6) ಸಂಜೆ ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳಿದ್ದ ವಿನೇಶ್, ಬುಧವಾರ (ಅ.7) ಕೆಲಸಕ್ಕೆ ಹಾಜರಾಗಿರಲಿಲ್ಲ. ಸಹೋದ್ಯೋಗಿಗಳು ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿರಲಿಲ್ಲ. ಮಧ್ಯಾಹ್ನ ಊಟಕ್ಕೆ ತೆರಳುವ ಸಂದರ್ಭದಲ್ಲೂ ಸಹೋದ್ಯೋಗಿಗಳು ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.ಇದರಿಂದ ಅನುಮಾನಗೊಂಡ ಸಹೋದ್ಯೋಗಿಗಳು ಅವರು ವಾಸವಾಗಿದ್ದ ಬಾಡಿಗೆ ಮನೆಗೆ ತೆರಳಿ ಪರಿಶೀಲಿಸಿದಾಗ, ಮನೆಯ ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದು ಕಂಡುಬಂದಿದೆ. ಮೊಬೈಲ್‌ಗೆ ಕರೆ ಮಾಡಿದಾಗ ಮನೆಯೊಳಗಿನಿಂದ ರಿಂಗ್ ಆಗುವ ಶಬ್ದ ಕೇಳಿಸಿದೆ. ಬಳಿಕ ಮನೆಯ ಫ್ಲ್ಯಾಬ್‌ನ ಇನ್‌ಪ್ಲೇಟರ್ ಮೂಲಕ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿ ಪರಿಶೀಲಿಸಿದಾಗ ವಿನೇಶ್ ನಿಸ್ತೇಜ ಸ್ಥಿತಿಯಲ್ಲಿ ಮಲಗಿರುವುದು ಕಂಡುಬಂದಿದೆ ಎನ್ನಲಾಗಿದೆ.ತಕ್ಷಣ ಪೊಲೀಸರು ಹಾಗೂ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ವಿನೇಶ್ ಅವರ ಸಹೋದರ ಸೇರಿದಂತೆ ಸಂಬಂಧಿಕರು ಪುತ್ತೂರಿಗೆ ಆಗಮಿಸಿದ್ದಾರೆ. ಅವರು ಸ್ಥಳಕ್ಕೆ ಬಂದ ಬಳಿಕ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ವಿನೇಶ್ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.ವಿನೇಶ್ ಅವರು ಈ ಹಿಂದೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಮಂಗಳವಾರ ರಾತ್ರಿ ವೇಳೆ ಉಸಿರಾಟದ ಸಮಸ್ಯೆ ಉಲ್ಬಣಗೊಂಡು ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪುತ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!