ಚನ್ನಗಿರಿ: ಆನ್‌ಲೈನ್ ಫ್ರೀ ಫೈರ್ ಗೇಮ್‌ನ ಐಡಿ ಪಡೆಯುವ ಆಸೆಗೆ ಬಿದ್ದು 4.11 ಲಕ್ಷ ರೂ. ಹಣ ಕಳೆದುಕೊಂಡ 13 ವರ್ಷದ ಬಾಲಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ.ಮೃತನನ್ನು ಪಾಂಡೋಮಟ್ಟಿ ಗ್ರಾಮದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮನೋಜ್ ಟಿ.ಆರ್. (13) ಎಂದು ಗುರುತಿಸಲಾಗಿದೆ.ಗೇಮ್‌ನ 105ನೇ ಲೆವೆಲ್ ಐಡಿ ನೀಡುವುದಾಗಿ ನಂಬಿಸಿ, ಬಾಲಕನಿಂದ ಹಂತ ಹಂತವಾಗಿ ಹಣ ಪಡೆದು, ಬಳಿಕ ಹಣ ನೀಡದಿದ್ದರೆ ಬಾಲಕ ಹಾಗೂ ಆತನ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ತಿಜೋರಿಯಿಂದ 4 ಲಕ್ಷ ರೂ. ಪಡೆದಿದ್ದ ಬಾಲಕಅದೇ ಗ್ರಾಮದ ಮನು ಹಾಗೂ ಆತನ ಐವರು ಸ್ನೇಹಿತರು ಮನೋಜ್‌ಗೆ ಫ್ರೀ ಫೈರ್ ಗೇಮ್‌ನ ಐಡಿ ನೀಡುವುದಾಗಿ ಹೇಳಿ ಆರಂಭದಲ್ಲಿ 6,000 ರೂ. ಪಡೆದಿದ್ದರು ಎನ್ನಲಾಗಿದೆ. ಬಳಿಕ ಹಂತ ಹಂತವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮನೆಯ ತಿಜೋರಿಯ ಒಂದು ಕೀಲಿ ಮನೋಜ್ ಬಳಿ ಇದ್ದ ಕಾರಣ ಪೋಷಕರಿಗೆ ತಿಳಿಯದಂತೆ ತಿಜೋರಿಯಿಂದ ಸುಮಾರು 4 ಲಕ್ಷ ರೂ. ನಗದು ತೆಗೆದುಕೊಂಡಿದ್ದಾನೆ.ಇದರ ಜೊತೆಗೆ ತಂದೆ-ತಾಯಿಯ ಮೊಬೈಲ್‌ನಿಂದ 11 ಸಾವಿರ ರೂ. ಫೋನ್‌ಪೇ ಮೂಲಕ ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ. ಒಟ್ಟು 4.11 ಲಕ್ಷ ರೂ. ಹಣ ನೀಡಿದ್ದರೂ ಐಡಿ ನೀಡದೆ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.ಪೋಷಕರಿಗೆ ವಿಚಾರ ತಿಳಿದ ಮರುದಿನವೇ ದುರಂತಸೆಪ್ಟೆಂಬರ್ 6ರಂದು ವಿಷಯ ಪೋಷಕರಿಗೆ ತಿಳಿದುಬಂದಿದ್ದು, ಅವರು ಬಾಲಕನಿಗೆ ಧೈರ್ಯ ತುಂಬಿದ್ದರು. ಆದರೆ ಸೆಪ್ಟೆಂಬರ್ 7ರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೋಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆರೋಪಿಗಳ ಬಂಧನಕ್ಕೆ ಆಗ್ರಹಬಾಲಕನ ಆತ್ಮಹತ್ಯೆಗೆ ಕಾರಣರಾದ ಮನು, ಬೊಮ್ಮಲಿಂಗ, ಮಣಿ, ಸಂಜು ಹಾಗೂ ಯಶವಂತ್ ಅವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಮೃತ ಬಾಲಕನ ತಂದೆ ರೇವಣ್ಣ ನೀಡಿದ ದೂರಿನ ಆಧಾರದ ಮೇಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!