ಪುತ್ತೂರು: ರೈತರು ಬೆಳೆ ವಿಮೆಗಾಗಿ ಹಣ ಪಾವತಿಸಿದ್ದರೂ ಪರಿಹಾರ ವಿತರಣೆಯಲ್ಲಿ ತಾರತಮ್ಯ ಕಂಡುಬರುತ್ತಿದೆ. ಗ್ರಾಮದಿಂದ ಗ್ರಾಮಕ್ಕೆ ಪರಿಹಾರದ ಮೊತ್ತದಲ್ಲಿ ವ್ಯತ್ಯಾಸವಿದ್ದು, ಇದರ ಹಿಂದೆ ಷಡ್ಯಂತ್ರ ಮತ್ತು ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದರು.ಅ. 8ರಂದು ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ₹294 ಕೋಟಿ ವಿಮಾ ಮೊತ್ತ ಪಾವತಿಸಿದ್ದು, ₹840 ಕೋಟಿ ಪರಿಹಾರ ಮೊತ್ತ ಬರಬೇಕಾಗಿದೆ. ರೈತರಿಗೆ ಈವರೆಗೆ ಎಷ್ಟು ಪರಿಹಾರ ವಿತರಿಸಲಾಗಿದೆ, ಪಾವತಿಸಿದ ವಿಮಾ ಮೊತ್ತಕ್ಕೆ ಅನುಗುಣವಾಗಿ ಎಷ್ಟು ಪರಿಹಾರ ನೀಡಲಾಗಿದೆ ಹಾಗೂ ಗ್ರಾಮವಾರು ಪರಿಹಾರದ ಮೊತ್ತದಲ್ಲಿ ವ್ಯತ್ಯಾಸವಾಗಲು ಕಾರಣವೇನು ಎಂಬುದನ್ನು ಸರಕಾರ ಮತ್ತು ವಿಮಾ ಕಂಪನಿಗಳು ಅಂಕಿ-ಅಂಶಗಳ ಸಹಿತ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.ಟರ್ಮ್ ಶೀಟ್ ಬದಲಾವಣೆಯ ಬಳಿಕ ಸಮಸ್ಯೆ2023-24ನೇ ಸಾಲಿನವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಆ ಬಳಿಕ ಟರ್ಮ್ ಶೀಟ್ ಬದಲಾವಣೆಯಾದ ನಂತರ ಸಮಸ್ಯೆಗಳು ಕಾಣಿಸಿಕೊಂಡಿವೆ. ವಿಮಾ ಮೊತ್ತ ಪಾವತಿಸಿದರೂ ಸೂಕ್ತ ಪರಿಹಾರ ಸಿಗದಿದ್ದರೆ ಮುಂದಿನ ದಿನಗಳಲ್ಲಿ ರೈತರು ವಿಮೆ ಕಟ್ಟಬೇಕೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ರೈತರು ವಿಮಾ ಮೊತ್ತ ಪಾವತಿಸುತ್ತಿದ್ದು, ವಿಮಾ ಪರಿಹಾರದಲ್ಲಿ ಶೇ. 4ರಷ್ಟು ಮೊತ್ತ ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ಗಳಿಗೆ ಪಾವತಿಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಬ್ಯಾಂಕ್ ಹಾಗೂ ಸಹಕಾರಿ ಸಂಘಗಳನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿದರು.ಒಂದೇ ತಾಲೂಕಿನಲ್ಲಿ ಮಳೆ ಪ್ರಮಾಣ ಮತ್ತು ಉಷ್ಣಾಂಶ ಒಂದೇ ರೀತಿಯಿದ್ದರೂ ಗ್ರಾಮದಿಂದ ಗ್ರಾಮಕ್ಕೆ ಪರಿಹಾರದ ಮೊತ್ತದಲ್ಲಿ ವ್ಯತ್ಯಾಸವೇಕೆ? ಕೇವಲ 100 ಮೀಟರ್ ಅಂತರದಲ್ಲೇ ₹10 ಸಾವಿರದಿಂದ ₹15 ಸಾವಿರದವರೆಗೆ ವ್ಯತ್ಯಾಸ ಕಂಡುಬರುತ್ತಿದೆ. ಒಂದೇ ತಾಲೂಕು, ಹೋಬಳಿ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲೂ ತಾರತಮ್ಯವಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.ವಿಮಾ ಕಂಪನಿಗಳ ವಿರುದ್ಧ ತನಿಖೆಗೆ ಆಗ್ರಹವಿಮಾ ಮೊತ್ತದ ಶೇ. 20ರಷ್ಟನ್ನು ರಾಜ್ಯ ಸರಕಾರ ಪಾವತಿಸುತ್ತಿರುವುದರಿಂದ ಈ ವಿಚಾರದಲ್ಲಿ ಸರಕಾರಕ್ಕೂ ಜವಾಬ್ದಾರಿಯಿದೆ. ಪರಿಹಾರ ವಿತರಣೆಯಲ್ಲಿನ ತಾರತಮ್ಯದ ಕುರಿತು ವಿಮಾ ಕಂಪನಿಗಳ ವಿರುದ್ಧ ತನಿಖೆ ನಡೆಸಬೇಕು. ರೈತರಿಗೆ ಅನ್ಯಾಯವಾಗುತ್ತಿದ್ದರೂ ಸರಕಾರ ಮೌನ ವಹಿಸಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ವಿಮಾ ಕಂಪನಿಗಳೊಂದಿಗೆ ಸಮಾಲೋಚನೆ ನಡೆಸದಿರುವುದೂ ಸರಿಯಲ್ಲ ಎಂದು ದೂರಿದರು.ಹವಾಮಾನ ಆಧಾರಿತ ಬೆಳೆ ವಿಮೆಗೆ ಮಳೆ ಮತ್ತು ಉಷ್ಣಾಂಶದ ದಾಖಲೆಗಳು ಪ್ರಮುಖವಾಗಿವೆ. 20 ಹೋಬಳಿ ಮಟ್ಟದಲ್ಲಿ ಉಷ್ಣಾಂಶ ಮಾಪಕಗಳಿದ್ದು, ಇವುಗಳ ವಾರ್ಷಿಕ ಮಳೆ ಮತ್ತು ಉಷ್ಣಾಂಶದ ದಾಖಲೆಗಳ ಆಧಾರದಲ್ಲಿ ಟರ್ಮ್ ಶೀಟ್ ಸಿದ್ಧಪಡಿಸಲಾಗುತ್ತದೆ. ವಿಪತ್ತು ನಿರ್ವಹಣಾ ಕೇಂದ್ರದ ವರದಿಯನ್ನು ಆಧರಿಸಿ ವಿಮಾ ಕಂಪನಿಗಳು ಪರಿಹಾರ ವಿತರಿಸುತ್ತವೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯಲ್ಲಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ಕಾರ್ಯದರ್ಶಿಯಾಗಿರುತ್ತಾರೆ ಎಂದು ವಿವರಿಸಿದರು.ತಾಲೂಕಿನ ಎಲ್ಲ ಗ್ರಾಮಗಳ ರೈತರಿಗೂ ಒಂದೇ ಮಾನದಂಡದ ಆಧಾರದಲ್ಲಿ ಪರಿಹಾರ ನೀಡಬೇಕು. ಒಂದು ಗ್ರಾಮಕ್ಕೆ ಗರಿಷ್ಠ ಪರಿಹಾರ ನೀಡಿದ್ದರೆ, ಅದೇ ಮಾನದಂಡದಂತೆ ಇತರ ಗ್ರಾಮಗಳ ರೈತರಿಗೂ ಪರಿಹಾರ ದೊರೆಯಬೇಕು. ಪಂಚಾಯತ್, ಹೋಬಳಿ ಮತ್ತು ಗ್ರಾಮವಾರು ತಾರತಮ್ಯ ಮುಂದುವರಿದರೆ ರೈತರು ಯೋಜನೆಯ ಮೇಲಿನ ವಿಶ್ವಾಸ ಕಳೆದುಕೊಳ್ಳಲಿದ್ದಾರೆ. ಈ ವಿಚಾರದಲ್ಲಿ ತೋಟಗಾರಿಕಾ ಇಲಾಖೆಯ ಮೌನವೂ ಸರಿಯಲ್ಲ ಎಂದರು.ಬರದಲ್ಲೂ ರಾಜಕೀಯ: ಸರಕಾರದ ವಿರುದ್ಧ ವಾಗ್ದಾಳಿರಾಜ್ಯದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ಆದರೆ, ಬರದಲ್ಲಿಯೂ ರಾಜಕೀಯ ಎದ್ದು ಕಾಣುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೆನ್ಸಿಲ್‌ನಿಂದ ಗುರುತು ಮಾಡಿದಂತೆ ಮಳೆ ಸುರಿಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ವ್ಯಂಗ್ಯವಾಡಿದರು.ಬಂಟ್ವಾಳ, ಉಳ್ಳಾಲ ಮತ್ತು ಬೆಳ್ತಂಗಡಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ, ಪುತ್ತೂರು, ಸುಳ್ಯ, ಮಂಗಳೂರು, ಮೂಡುಬಿದಿರೆ ಹಾಗೂ ಕಡಬ ತಾಲೂಕುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಯಾವ ವೈಜ್ಞಾನಿಕ ವರದಿಯ ಆಧಾರದಲ್ಲಿ ಈ ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ? ನಿರ್ಧಾರ ವೈಜ್ಞಾನಿಕ ಮಾನದಂಡಗಳ ಆಧಾರದಲ್ಲಿದೆಯೇ ಅಥವಾ ರಾಜಕೀಯ ಇಚ್ಛಾಶಕ್ತಿಯ ಫಲವೇ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ರಾಜ್ಯ ಸರಕಾರದ ರೈತ ವಿರೋಧಿ ನೀತಿಅಡಿಕೆ ಬೆಳೆಗಾರರು ವಿಮಾ ಮೊತ್ತ ಪಾವತಿಸಿದ್ದರೂ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ಮತ್ತೊಂದೆಡೆ ಅಡಿಕೆ ಧಾರಣೆಯೂ ಕುಸಿದಿದೆ. ಹಿಂದಿನ ಸರಕಾರದ ಅವಧಿಯಲ್ಲಿ ರೈತರಿಗೆ ನೀಡಲಾಗುತ್ತಿದ್ದ ಕಿಸಾನ್ ಸಮ್ಮಾನ್ ಮತ್ತು ವಿದ್ಯಾನಿಧಿ ಯೋಜನೆಗಳನ್ನು ಈಗಿನ ಸರಕಾರ ಸ್ಥಗಿತಗೊಳಿಸಿದೆ. ಒಂದಲ್ಲ ಒಂದು ರೀತಿಯಲ್ಲಿ ರೈತರಿಗೆ ಹೊಡೆತ ನೀಡುತ್ತಿರುವ ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಂಜೀವ ಮಠಂದೂರು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಹಾಗೂ ರೈತ ಮೋರ್ಚಾದ ಅಧ್ಯಕ್ಷ ಶರತ್‌ಚಂದ್ರ ಬೈಪಾಡಿತ್ತಾಯ ಉಪಸ್ಥಿತರಿದ್ದರು.











