ಪುತ್ತೂರು: ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯ ಪರಿಶೀಲನಾ ಕಾರ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಆರಂಭವಾಗಿಲ್ಲ. ಮುಂದಿನ ದಿನಗಳಲ್ಲಿ ಫಲಾನುಭವಿಗಳ ಮನೆಗಳಿಗೆ ತೆರಳಿ ಜಿಪಿಎಸ್ ಮೂಲಕ ಪರಿಶೀಲನೆ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಮಾಹಿತಿಗಳನ್ನು ನಂಬಬಾರದು ಎಂದು ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮನವಿ ಮಾಡಿದರು.ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರದ ಯೋಜನೆಗಳು ಪಾರದರ್ಶಕವಾಗಿ ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂಬ ಉದ್ದೇಶದಿಂದ ಗೃಹಜ್ಯೋತಿ ಯೋಜನೆಯ ಮಾದರಿಯಲ್ಲಿ ಗೃಹಲಕ್ಷ್ಮೀ ಯೋಜನೆಯನ್ನೂ ಪರಿಶೀಲಿಸಲಾಗುತ್ತದೆ. ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿದ ಬಳಿಕ ಪರಿಶೀಲನಾ ಕಾರ್ಯ ಆರಂಭವಾಗಲಿದೆ. ಆದರೆ, ಈಗಾಗಲೇ ಪರಿಶೀಲನೆ ಆರಂಭವಾಗಿದೆ ಎಂಬ ತಪ್ಪು ಮಾಹಿತಿಗಳು ಹರಿದಾಡುತ್ತಿರುವುದರಿಂದ ಫಲಾನುಭವಿಗಳು ಗೊಂದಲಕ್ಕೀಡಾಗಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ ಎಂದು ಹೇಳಿದರು.ಪರಿಶೀಲನೆ ಆರಂಭವಾಗುವವರೆಗೆ ಪ್ರಸ್ತುತ ಹಣ ಪಡೆಯುತ್ತಿರುವ ಎಲ್ಲ ಫಲಾನುಭವಿಗಳಿಗೂ ಹಣ ಪಾವತಿಯಾಗಲಿದೆ. ಪರಿಶೀಲನೆಯ ಬಳಿಕ ಅರ್ಹತೆ ಹೊಂದಿರುವವರಿಗೆ ಮಾತ್ರ ಯೋಜನೆಯ ಹಣ ಪಾವತಿಯಾಗಲಿದೆ. ಈ ಬಗ್ಗೆ ಯಾರೂ ಗೊಂದಲಕ್ಕೊಳಗಾಗಬಾರದು ಎಂದು ಸ್ಪಷ್ಟಪಡಿಸಿದರು.ಮೃತ ಫಲಾನುಭವಿಗಳ ಖಾತೆಗೆ 29.46 ಲಕ್ಷ ರೂ. ಪಾವತಿಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಮೃತಪಟ್ಟ ಬಳಿಕ ಅವರ ಖಾತೆಗಳಿಗೆ ಪಾವತಿಯಾದ ಹಣದ ಕುರಿತು ಸಹಾಯಕ ಸಿಡಿಪಿಒ ಮಂಗಳಾ ಕಾಳೆ ಮಾಹಿತಿ ನೀಡಿದರು. ಪುತ್ತೂರು ತಾಲೂಕಿನಲ್ಲಿ 321 ಮೃತ ಫಲಾನುಭವಿಗಳ ಖಾತೆಗಳಿಗೆ ಒಟ್ಟು 29.46 ಲಕ್ಷ ರೂ. ಪಾವತಿಯಾಗಿದೆ. ಈ ಪೈಕಿ 10.83 ಲಕ್ಷ ರೂ.ಗಳನ್ನು ಬ್ಯಾಂಕ್‌ಗಳು ಸರಕಾರಕ್ಕೆ ಹಿಂದಿರುಗಿಸಿದ್ದು, ಶೇ.36.78ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು 13.24 ಲಕ್ಷ ರೂ.ಗಳನ್ನು ಮೃತ ಫಲಾನುಭವಿಗಳ ಕುಟುಂಬದ ಸದಸ್ಯರು ಬ್ಯಾಂಕ್‌ಗಳಿಂದ ಡ್ರಾ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.ಅನಂತಾಡಿಗೆ ಬಸ್ ಸೌಲಭ್ಯ, ಉಚಿತ ಟಿಕೆಟ್ ವಿತರಣೆಗೆ ಸೂಚನೆಅನಂತಾಡಿಗೆ ಬಸ್ ಸೌಲಭ್ಯ ಕಲ್ಪಿಸುವ ಬೇಡಿಕೆ ಕುರಿತು ಕೆಎಸ್‌ಆರ್‌ಟಿಸಿ ಪುತ್ತೂರು ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್ ಅವರನ್ನು ಅಧ್ಯಕ್ಷರು ಪ್ರಶ್ನಿಸಿದರು. ಪುತ್ತೂರು–ಮಂಗಳೂರು ಎಕ್ಸ್‌ಪ್ರೆಸ್ ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕರ ಜವಾಬ್ದಾರಿಯನ್ನು ಒಬ್ಬರೇ ನಿರ್ವಹಿಸುತ್ತಿದ್ದು, ಮಹಿಳೆಯರಿಗೆ ಉಚಿತ ಪ್ರಯಾಣದ ಟಿಕೆಟ್ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ಹೇಳಿದರು.ಮಹಿಳೆಯರಿಗೆ ಉಚಿತ ಪ್ರಯಾಣವಿದ್ದರೂ ಟಿಕೆಟ್ ನೀಡುವುದು ಕಡ್ಡಾಯ. ಈ ಕುರಿತು ಬಸ್ ಸಿಬ್ಬಂದಿಗೆ ಸೂಕ್ತ ಸೂಚನೆ ನೀಡಿ, ಟಿಕೆಟ್ ವಿತರಣೆಯಲ್ಲಿ ನಿರ್ಲಕ್ಷ್ಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಅಕ್ಕಿ ವಿತರಣೆಯಲ್ಲಿ ಗುಣಮಟ್ಟ ಕಾಪಾಡಲು ಸೂಚನೆಪುತ್ತೂರಿನ ನ್ಯಾಯಬೆಲೆ ಅಂಗಡಿಯೊಂದರಲ್ಲಿ ನೆಲಕ್ಕೆ ಬಿದ್ದ ಅಕ್ಕಿಯನ್ನು ಗುಡಿಸಿ ಗೋಣಿಗೆ ತುಂಬಿಸಿ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಯಾವುದೇ ಕಾರಣಕ್ಕೂ ಅಕ್ಕಿ ನೆಲಕ್ಕೆ ಬೀಳದಂತೆ ಎಚ್ಚರ ವಹಿಸಬೇಕು. ನೆಲಕ್ಕೆ ಬಿದ್ದ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಿಸಬಾರದು ಎಂದು ಅಧ್ಯಕ್ಷರು ಸೂಚಿಸಿದರು.ಅಲ್ಲದೆ, ನ್ಯಾಯಬೆಲೆ ಅಂಗಡಿಗಳಿಗೆ ಬಂದ ಗೋಣಿ ಚೀಲಗಳಲ್ಲಿರುವ ಅಕ್ಕಿಯನ್ನು ಅದೇ ರೂಪದಲ್ಲಿ ಫಲಾನುಭವಿಗಳಿಗೆ ನೀಡಬಾರದು. ಗೋಣಿ ಚೀಲಗಳನ್ನು ತಿಂಗಳ ಕೊನೆಯವರೆಗೆ ಸಂಗ್ರಹಿಸಿಟ್ಟು, ಪರಿಶೀಲನೆಯ ಬಳಿಕ ಒಟ್ಟಾಗಿ ಹರಾಜು ಮಾಡಬೇಕು ಎಂಬ ನಿಯಮವಿದೆ ಎಂದು ತಿಳಿಸಿದರು. ಅನ್ನಭಾಗ್ಯ ಯೋಜನೆಯ ಕುರಿತು ಆಹಾರ ಇಲಾಖೆಯ ಸರಸ್ವತಿ ಮಾಹಿತಿ ನೀಡಿದರು.ಗೃಹಜ್ಯೋತಿ ಪರಿಶೀಲನೆ: ಪಂಚಾಯತ್‌ವಾರು ಮಾಹಿತಿ ನೀಡಲು ಸೂಚನೆಗೃಹಜ್ಯೋತಿ ಯೋಜನೆಯ ಪರಿಶೀಲನಾ ಕಾರ್ಯದ ಕುರಿತು ಮೆಸ್ಕಾಂ ಎಇಇ ರಾಜೇಶ್ ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ಪರಿಶೀಲನೆ ನಡೆಸಿರುವ ಮನೆಗಳು ಹಾಗೂ ಪರಿಶೀಲನೆ ಬಾಕಿ ಇರುವ ಮನೆಗಳ ವಿವರಗಳನ್ನು ಪಂಚಾಯತ್‌ವಾರು ಸಮಿತಿಗೆ ನೀಡುವಂತೆ ಅಧ್ಯಕ್ಷರು ಸೂಚಿಸಿದರು.ಪುತ್ತೂರಿನ ನೈತಾಡಿಯ ಮನೆಯೊಂದರ ವಿದ್ಯುತ್ ಸಂಪರ್ಕದ ಗೊಂದಲವನ್ನು ಸಮಿತಿ ಸದಸ್ಯ ಸಂತೋಷ್ ರೈ ಚಿಲ್ಮೆತ್ತಾರ್ ಸಭೆಯ ಗಮನಕ್ಕೆ ತಂದರು. ಇದು ಲೇಔಟ್ ಮಾದರಿಯ ನಿವೇಶನವಾಗಿದ್ದು, ಪ್ರತಿ ಕಿಲೋವ್ಯಾಟ್‌ಗೆ 6,000 ರೂ.ಗಳಂತೆ ಮೊತ್ತವನ್ನು ಮೆಸ್ಕಾಂಗೆ ಪಾವತಿಸಬೇಕಾಗುತ್ತದೆ ಎಂದು ಎಇಇ ರಾಜೇಶ್ ತಿಳಿಸಿದರು.ಪುತ್ತೂರು ಕ್ಷೇತ್ರಕ್ಕೆ 640.87 ಕೋಟಿ ರೂ. ಅನುದಾನರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಡಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ, ಬಂಟ್ವಾಳ ತಾಲೂಕಿನ ಕೆಲವು ಭಾಗಗಳನ್ನೂ ಒಳಗೊಂಡಂತೆ, ಒಟ್ಟು 640.87 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದರು.ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಯೋಜನಾ ನಿರ್ದೇಶಕಿ ಶೋಭಾ ವಂದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!