ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿವೆ. ಮಡ್ಯಂಗಳ, ಮದ್ದ ಹಾಗೂ ಪೆರಿಗೇರಿ ರಸ್ತೆಗಳಲ್ಲಿಯೂ ಮರಗಳು ಧರೆಗುರುಳಿದ್ದು, ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿವೆ. ಇದರಿಂದ ಹಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.ಪರ್ಯಾಯ ಮಾರ್ಗ ಬಳಸಿತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದೆ. ಆದ್ದರಿಂದ ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪುತ್ತೂರಿನಿಂದ ಬೆಳ್ಳಾರೆ ಮಾರ್ಗವಾಗಿ ಸುಳ್ಯ ತಲುಪಿ, ಅಲ್ಲಿಂದ ಮೈಸೂರು ಕಡೆಗೆ ಪ್ರಯಾಣಿಸುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!