ಮಂಗಳೂರು, ಅ. 9: ಕೋಟಿ ಮೌಲ್ಯದ ಆಸ್ತಿಗಾಗಿ ಸ್ವಂತ ತಂದೆಯನ್ನೇ ಮಗಳು ತನ್ನ ಗೆಳೆಯನೊಂದಿಗೆ ಸೇರಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಎರಡು ತಿಂಗಳ ಹಿಂದೆ ದಫನ ಮಾಡಲಾಗಿದ್ದ ಮೃತದೇಹವನ್ನು ಪೊಲೀಸರು ಸಮಾಧಿಯಿಂದ ಹೊರತೆಗೆದು ವಿಧಿವಿಜ್ಞಾನ ಪ್ರಯೋಗಾಲಯದ (FSL) ಪರೀಕ್ಷೆಗೆ ಮುಂದಾಗಿದ್ದಾರೆ.

ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ರೇಗೋ (Albert Rego) ಅವರ ನಿಗೂಢ ಸಾವಿನ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಸಾವಿನ ಬಳಿಕವೂ ಯಾರಿಗೂ ತಿಳಿಸದೆ ಅಂತ್ಯಕ್ರಿಯೆ!ಆಲ್ಬರ್ಟ್ ರೇಗೋ ಅವರು ಕಳೆದ ಜುಲೈ 19ರಂದು ಮೃತಪಟ್ಟಿದ್ದರು. ಅವರ ಮಗಳು ಮಾಯಾ ರೇಗೋ, ತಂದೆಯ ಸಾವಿನ ಬಗ್ಗೆ ಅಕ್ಕಪಕ್ಕದ ಮನೆಯವರಿಗೆ ಹಾಗೂ ದೂರದ ಸಂಬಂಧಿಕರಿಗೆ ಮಾಹಿತಿ ನೀಡದೆ, ದೇರೆಬೈಲ್ ಚರ್ಚ್‌ನ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದರು ಎನ್ನಲಾಗಿದೆ. ತಂದೆಯೊಂದಿಗೆ ವಾಸಿಸುತ್ತಿದ್ದ ಮಗಳ ಈ ನಡೆ ಆಲ್ಬರ್ಟ್ ಅವರ ಆಪ್ತ ಸ್ನೇಹಿತರಲ್ಲಿ ಅನುಮಾನ ಮೂಡಿಸಿತ್ತು.ಆಸ್ತಿ ವಿಚಾರವಾಗಿ ಕಿರುಕುಳದ ಆರೋಪಆಲ್ಬರ್ಟ್ ಅವರು ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸಾಕಷ್ಟು ಆಸ್ತಿ ಸಂಪಾದಿಸಿದ್ದರು ಎನ್ನಲಾಗಿದೆ. ಅವರ ಇನ್ನಿಬ್ಬರು ಮಕ್ಕಳು ಬೇರೆ ಬೇರೆ ಕಡೆ ವಾಸವಾಗಿದ್ದು, ಮಗಳು ಮಾಯಾ ಮಾತ್ರ ತಂದೆಯೊಂದಿಗೆ ನೆಲೆಸಿದ್ದರು. ಆಸ್ತಿ ವಿಚಾರವಾಗಿ ಮಗಳು ಕಿರುಕುಳ ನೀಡುತ್ತಿದ್ದಳು, ನಿರಂತರ ಹಲ್ಲೆ ನಡೆಸುತ್ತಿದ್ದಳು ಹಾಗೂ ಬಲವಂತವಾಗಿ ವೀಲುನಾಮೆ ಬರೆಸಿಕೊಂಡಿದ್ದಳು ಎಂದು ಆಲ್ಬರ್ಟ್ ಸ್ನೇಹಿತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.ತಮಗೇನಾದರೂ ಸಂಭವಿಸಿದರೆ ಮಗಳ ಕಿರುಕುಳವೇ ಕಾರಣವಾಗಬಹುದು ಎಂದು ಆಲ್ಬರ್ಟ್ ಹೇಳಿಕೊಂಡಿದ್ದರು ಎಂಬುದಾಗಿ ಹೆರಾಲ್ಡ್ ಪಿರೇರಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ ಬೋಂದೆಲ್‌ನ ವೈದ್ಯರೊಬ್ಬರು ಹಾಗೂ ಪೊಲೀಸ್ ಪೇದೆಯೊಬ್ಬರು ಸಹಕರಿಸಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.ಸಮಾಧಿಯಿಂದ ಶವ ಹೊರತೆಗೆದು ಪರೀಕ್ಷೆಈ ಸಂಬಂಧ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಸಂಶಯಾಸ್ಪದ ಸಾವಿನ ಸತ್ಯಾಸತ್ಯತೆ ಪತ್ತೆಹಚ್ಚಲು ಕುಂಟಿಕಾನ ಸಮೀಪದ ದೇರೆಬೈಲ್ ಚರ್ಚ್ ಆವರಣದ ದಫನ ಭೂಮಿಯಿಂದ ಆಲ್ಬರ್ಟ್ ಅವರ ಮೃತದೇಹವನ್ನು ಹೊರತೆಗೆಯುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.

ಪೊಲೀಸರು ಹಾಗೂ FSL ತಜ್ಞರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹದ ಅವಶೇಷಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ. ಈ ಮೂಲಕ ಆಲ್ಬರ್ಟ್ ಅವರ ಸಾವಿನ ಹಿಂದಿನ ನೈಜ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!