ಕಾಸರಗೋಡು: ಸಾಮಾಜಿಕ ಜಾಲತಾಣದಲ್ಲಿ ನಕಲಿ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ವಿವಾಹಿತ ಮಹಿಳೆಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗಿದಲ್ಲದೆ, ಆಕೆಯ ಖಾಸಗಿ ವೀಡಿಯೊವನ್ನು ವಿದೇಶದಲ್ಲಿರುವ ಪತಿ ಹಾಗೂ ಮಗಳಿಗೆ ಕಳುಹಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಕೇರಳದ ಕೊಲ್ಲಂ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತನನ್ನು ಕೊಲ್ಲಂ ಜಿಲ್ಲೆಯ ಕುರುವಿಪುಳ ನಿವಾಸಿ ರಾಹುಲ್ (32) ಎಂದು ಗುರುತಿಸಲಾಗಿದೆ. ಕಾಸರಗೋಡು ಜಿಲ್ಲೆಯ ಅಂಬಲತ್ತಾರ ಪೊಲೀಸ್ ಠಾಣೆ ವ್ಯಾಪ್ತಿಯ 40 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.ಫೇಸ್‌ಬುಕ್‌ನಲ್ಲಿ ನಕಲಿ ಹೆಸರಿನಲ್ಲಿ ಪರಿಚಯಆರೋಪಿಯು ಫೇಸ್‌ಬುಕ್‌ನಲ್ಲಿ ‘ಪ್ರೇಮ್’ ಎಂಬ ನಕಲಿ ಹೆಸರಿನಲ್ಲಿ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದ ಎನ್ನಲಾಗಿದೆ. ಬಳಿಕ ಆಕೆಯನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೋಝಿಕ್ಕೋಡ್, ಕಣ್ಣೂರಿನ ಪರಶಿನಿಕಡವು ಸೇರಿದಂತೆ ಮಹಿಳೆಯ ಮನೆಯಲ್ಲಿಯೂ ದೌರ್ಜನ್ಯ ಎಸಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.ಮೊಬೈಲ್ ಸಂಖ್ಯೆ ಬ್ಲಾಕ್ ಮಾಡಿದ್ದಕ್ಕೆ ಬೆದರಿಕೆಆರೋಪಿಯ ಕಿರುಕುಳ ತಾಳಲಾರದೆ ಮಹಿಳೆ ಆತನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿ, ಮಹಿಳೆಯ ಖಾಸಗಿ ವೀಡಿಯೊವನ್ನು ವಿದೇಶದಲ್ಲಿರುವ ಆಕೆಯ ಪತಿ ಹಾಗೂ ಮಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ಅಂಬಲತ್ತಾರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಎರ್ನಾಕುಲಂನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.ರಾಜಪುರಂ ವೃತ್ತ ನಿರೀಕ್ಷಕ ಎ. ಸಂತೋಷ್ ಕುಮಾರ್ ಅವರ ಮಾಹಿತಿ ಪ್ರಕಾರ, ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!