ಪುತ್ತೂರು: ಪೋಕ್ಸೊ ಪ್ರಕರಣದಲ್ಲಿ ಬಂಧಿತನಾಗಿದ್ದ ತಣ್ಣೀರುಪಂಥ ಗ್ರಾಮದ ಮೊಯಿನು ಯಾನೆ ಮೊಹಿನುದ್ದೀನ್ ಎಂಬಾತನಿಗೆ ಪುತ್ತೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಸೆ. 19ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಸಂತ್ರಸ್ತ ಬಾಲಕಿ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದಳು. ಬೆಳಿಗ್ಗೆ 10.40ರ ಸುಮಾರಿಗೆ ಸುಹೈಲ್ ಎಂಬವರು ಬಾಲಕಿಯ ತಂದೆಗೆ ಕರೆ ಮಾಡಿ, ಆಕೆ ದೇರಳಕಟ್ಟೆಯ ಬ್ಯಾರಿಸ್ ಮಾಲ್ ಬಳಿ ಯುವಕನೊಬ್ಬನೊಂದಿಗೆ ಇರುವುದಾಗಿ ಮಾಹಿತಿ ನೀಡಿದ್ದರು.ಸಂಜೆ ಮನೆಗೆ ಮರಳಿದ ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ, ಆರೋಪಿ ತನ್ನನ್ನು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾಗಿ ತಿಳಿಸಿದ್ದಳು. ಈ ವೇಳೆ ಬಾಲಕಿಯ ಕುತ್ತಿಗೆಯ ಬಳಿ ಗಾಯವಾಗಿ ರಕ್ತ ಬರುತ್ತಿರುವುದನ್ನು ಗಮನಿಸಿದ ತಂದೆ, ಗಾಯದ ಬಗ್ಗೆ ವಿಚಾರಿಸಿದರೂ ಆಕೆ ಉತ್ತರಿಸಿರಲಿಲ್ಲ. ಇದರಿಂದ ಸಂಶಯಗೊಂಡ ತಂದೆ ಸೆ. 20ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ದೂರಿನ ಆಧಾರದಲ್ಲಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಮೊಯಿನು ಯಾನೆ ಮೊಹಿನುದ್ದೀನ್‌ನನ್ನು ಸೆ. 22ರಂದು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುಮಂಗಲ ಚಕಲಬ್ಬಿ ಅವರು ಜಾಮೀನು ಮಂಜೂರು ಮಾಡಿದ್ದಾರೆ.ಆರೋಪಿ ಪರ ವಕೀಲ ಮಹೇಶ್ ಕಜೆ ವಾದ ಮಂಡಿಸಿದ್ದರು.











