ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸರು ಬಿಳಿಯೂರುಕಟ್ಟೆ ಬಳಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದ್ದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಗತ್ಯ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಮಾರಾಟ ಮಾಡಿದ ಆರೋಪದ ಮೇರೆಗೆ ಆರ್ಯಾಪು ಗ್ರಾಮದ ಶಿವಪ್ರಸಾದ್ (52) ಎಂಬವರ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಅ. 5ರಂದು ಆರ್ಯಾಪು ಗ್ರಾಮದ ದೇವಸ್ಯದಲ್ಲಿರುವ ಮೈಯ್ಯ ಫಾರ್ಮ್‌ನಿಂದ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಕೇರಳದ ಕಡೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿ ಸುಷ್ಠಾ ಜಿ. ಭಂಡಾರಿ ಅವರು ಸಿಬ್ಬಂದಿಯೊಂದಿಗೆ ಬಲ್ನಾಡು ಗ್ರಾಮದ ಬಿಳಿಯೂರುಕಟ್ಟೆ ಬಳಿ ಕಾರ್ಯಾಚರಣೆ ನಡೆಸಿದ್ದರು.ಈ ವೇಳೆ ಕೆಎ 19 ಎಎಫ್ 8558 ನೋಂದಣಿ ಸಂಖ್ಯೆಯ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, 11 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಪತ್ತೆಯಾಗಿತ್ತು. ಪೊಲೀಸರು ವಾಹನವನ್ನು ತಡೆದ ಸಂದರ್ಭದಲ್ಲಿ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದರು.ಜಾನುವಾರುಗಳನ್ನು ಅಗತ್ಯ ಪರವಾನಿಗೆ ಇಲ್ಲದೆ ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಕೇರಳಕ್ಕೆ ಸಾಗಿಸಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020ರ ಕಲಂ 4, 6, 7 ಮತ್ತು 12 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960ರ ಕಲಂ 11(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.ತನಿಖೆಯ ವೇಳೆ ಜಾನುವಾರುಗಳನ್ನು ಅಗತ್ಯ ದಾಖಲೆಪತ್ರಗಳು ಹಾಗೂ ಪರವಾನಿಗೆ ಇಲ್ಲದೆ ಮಾರಾಟ ಮಾಡಿದ ಆರೋಪದ ಮೇರೆಗೆ ಆರ್ಯಾಪು ಗ್ರಾಮದ ಶಿವಪ್ರಸಾದ್ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಅ. 8ರಂದು ಅವರ ಮನೆ ಹಾಗೂ ಕೊಟ್ಟಿಗೆ ಪರಿಸರವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಪ್ರಕರಣದಲ್ಲಿ ಪರಾರಿಯಾಗಿದ್ದ ಪಿಕಪ್ ಚಾಲಕ ಪೇರಮೊಗ್ರು ನಿವಾಸಿ ಇಬ್ರಾಹಿಂ (35) ಹಾಗೂ ಮಾಶಿಕ್ ಮುಡಿಪು ಎಂಬವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.











