ಕುಂಬ್ರ: ಸುಳ್ಯ ತಾಲೂಕಿನ ಸಂಪಾಜೆ ಸಮೀಪದ ಕಡೆಪಾಲದಲ್ಲಿ ನಡೆದಿದ್ದ ಕುಂಬ್ರ ಸಾರೆಪುಣಿಯ ಫಾತಿಮತ್ ನಿಶಾನ (22) ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಸಿ.ಪಿ. ಅಳವಿ ಅವರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಕುಂಬ್ರ ಸಮೀಪದ ಸಾರೆಪುಣಿಯ ಜುಬೈದಾ ಅವರ ಪುತ್ರಿ ಫಾತಿಮತ್ ನಿಶಾನ ಅವರು ಸಂಪಾಜೆ ಕಡೆಪಾಲದ ಆಲಿಗುಡ್ಡೆ ನಿವಾಸಿ ಸಿ.ಪಿ. ಅಳವಿ ಕುಟ್ಟಿ ಅವರ ಪುತ್ರ ಅನ್ಸಾರ್ ಅವರ ಪತ್ನಿಯಾಗಿದ್ದರು. ಜು. 18ರಂದು ಪತಿಯ ಮನೆಯಲ್ಲಿ ಫಾತಿಮತ್ ನಿಶಾನ ನಿಗೂಢವಾಗಿ ಸಾವಿಗೀಡಾಗಿದ್ದರು.ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ತಾಯಿ ಜುಬೈದಾ ಅವರು ಸುಳ್ಯ ಪೊಲೀಸರಿಗೆ ದೂರು ನೀಡಿದ್ದರು. ಮಗಳ ಪತಿ ಅನ್ಸಾರ್ ಬೆಂಗಳೂರಿನಲ್ಲಿದ್ದು, ಪತ್ನಿಯನ್ನೂ ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ಆದರೆ, ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋದರೆ ಮತ್ತೆ ಮನೆಗೆ ಬರಬಾರದು ಎಂದು ಬೆದರಿಸಿ, ಅತ್ತೆ ಮತ್ತು ಮಾವ ಮನೆಯಲ್ಲಿ ಉಳಿಸಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.ಮೃತಳ ಮಾವ ಅಳವಿ, ಅತ್ತೆ ಆಯಿಷಾ ಹಾಗೂ ನಾದಿನಿ ಫಸೀಲಾ ಸೇರಿಕೊಂಡು ತನ್ನ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಜುಬೈದಾ ಆರೋಪಿಸಿದ್ದರು. ಆರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದ ಸುಳ್ಯ ಪೊಲೀಸರು, ತಾಯಿಯ ದೂರಿನ ಆಧಾರದಲ್ಲಿ ಕೊಲೆ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಜು. 22ರಂದು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಆಯಿಷಾ ಸಿ.ಎ. ಮತ್ತು ಫಸೀಲಾ ಸಿ.ಎ. ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕೆಲವು ದಿನಗಳ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಮುಖ ಆರೋಪಿ ಸಿ.ಪಿ. ಅಳವಿ ಅವರಿಗೂ ನ್ಯಾಯಾಲಯ ಜಾಮೀನು ನೀಡಿದೆ.ಆರೋಪಿ ಪರವಾಗಿ ವಕೀಲರಾದ ಎಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಎನ್.ಕೆ. ಹಾಗೂ ವಿಮಲೇಶ್ ಆರ್. ಗೌಡ ವಾದಿಸಿದ್ದರು.











