
ಮಂಡ್ಯ : ಗಣೇಶ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ನಡೆದಿದ್ದ ಕೋಮುಗಲಭೆ ಪ್ರಕರಣದಲ್ಲಿ ತನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭಯದಿಂದ, ಊರು ಬಿಟ್ಟಿದ್ದ ಕಿರಣ್ (23) ಎಂಬ ಯುವಕ ಬ್ರೈನ್ ಸ್ಟ್ರೋಕ್‌ನಿಂದ ಮೃತಪಟ್ಟಿದ್ದಾನೆ ಎಂಬುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಮಂಡ್ಯ ಜಿಲ್ಲಾ ಪೊಲೀಸ್ ಸ್ಪಷ್ಟನೆ ನೀಡಿದೆ.
ಬ್ರೈನ್ ಸ್ಟ್ರೋಕ್ನಿಂದ ಮೃತಪಟ್ಟಿರುವ ಯುವಕ ಕಿರಣ್ ಕುಮಾರ್ ಬದರಿಕೊಪ್ಪಲು ಗ್ರಾಮದವರಾಗಿದ್ದು, ನಾಗಮಂಗಲ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವುದಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿದಾಡಿದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಪೊಲೀಸ್ ಪ್ರಕಟಣೆ ಮೂಲಕ ನೈಜ ಸಂಗತಿಯನ್ನು ಬಿಚ್ಚಿಟ್ಟಿದ್ದು, ಗಲಭೆಯಲ್ಲಿ A1 ಆರೋಪಿ ಕಿರಣ್ ಕುಮಾರ್ ಎಸ್ ಬಿನ್ ಶ್ರೀನಿವಾಸ್ (26) ನನ್ನು ಈಗಾಗಲೇ ಅರೆಸ್ಟ್ ಮಾಡಲಾಗಿದ್ದು, ಸದ್ಯ ಆರೋಪಿಯು ಮಂಡ್ಯ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವುದಾಗಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.







