

ನವದೆಹಲಿ: ಪಾನ್ ಮಸಾಲ, ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳುವವರಿಗೆ ಬುದ್ಧಿ ಕಲಿಸಲು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಇಂದು ಉಪಾಯವೊಂದನ್ನು ನೀಡಿದ್ದಾರೆ.
ಪಾನ್, ಮಸಾಲಾ, ಗುಟ್ಕಾ ಸೇವಿಸಿ ರಸ್ತೆಯಲ್ಲಿ ಉಗುಳುವವರ ಫೋಟೋ ತೆಗೆದು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಕು ಎಂದು ಗಡ್ಕರಿ ಸಲಹೆ ನೀಡಿದ್ದಾರೆ.
ಗಾಂಧಿ ಜಯಂತಿಯಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ ಸ್ವಚ್ಛ ಭಾರತ್ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ. ಇದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ಬಗ್ಗೆಯೂ ಗಡ್ಕರಿ ಮಾತನಾಡಿದ್ದಾರೆ. ನಮ್ಮ ದೇಶದ ಜನ ತುಂಬಾ ಬುದ್ಧಿವಂತರು. ಚಾಕಲೇಟ್ ತಿಂದು ಅದರ ಕವರನ್ನು ರಸ್ತೆಗೆ ಎಸೆಯುತ್ತಾರೆ. ಅದೇ ವ್ಯಕ್ತಿ ವಿದೇಶಕ್ಕೆ ಹೋದಾಗ ಜೇಬಿನಲ್ಲಿ ಚಾಕಲೇಟ್ ಕವರ್ ಇಟ್ಟುಕೊಂಡು ವಿದೇಶದಲ್ಲಿ ಚೆನ್ನಾಗಿ ವರ್ತಿಸುತ್ತಾರೆ. ಆದರೆ, ಇಲ್ಲಿ ಮಾತ್ರ ಕಸವನ್ನು ರಸ್ತೆಗೆ ಎಸೆಯುತ್ತಾರೆ ಎಂದಿದ್ದಾರೆ.
ಈ ವೇಳೆ ತಮ್ಮ ಬಗ್ಗೆಯೂ ಹೇಳಿಕೊಂಡ ಅವರು, ಮೊದಲೆಲ್ಲ ನಾನು ಚಾಕಲೇಟ್ ತಿಂದಾಗ ರಸ್ತೆಯಲ್ಲೇ ಕವರ್ ಬಿಸಾಡುತ್ತಿದ್ದೆ. ಆದರೆ, ಈಗ ಚಾಕಲೇಟ್ ತಿಂದಾಗಲೆಲ್ಲ ಆ ಕವರ್ ಅನ್ನು ಮನೆಗೆ ತೆಗೆದುಕೊಂಡು ಹೋಗಿ ಬಿಸಾಡುತ್ತೇನೆ. ಮನೆ ತಲುಪಿದ ನಂತರ ಚಾಕಲೇಟ್ ರ್ಯಾಪರ್ ಅನ್ನು ಬಿಸಾಡುತ್ತೇನೆ ಎಂದು ತಮ್ಮದೇ ಉದಾಹರಣೆಯನ್ನು ನೀಡಿದ್ದಾರೆ.
