ಪುತ್ತೂರು; ಪತ್ರಿಕಾ ಮಾದ್ಯಮಕ್ಕೆ ವಿಶೇಷವಾದ ಸ್ಥಾನ ಇದೆ. ಈ ಸಮಾಜವನ್ನು ತಿದ್ದುವ, ಸಮಾಜದಲ್ಲಿ ಸೌಹಾರ್ಧತೆಯನ್ನು ಬೆಳೆಸುವ ಹಾಗೂ ಜನತೆಗೆ ಮಾಹಿತಿ ನೀಡುವ ಕಾರ್ಯದ ಜತೆಗೆ ಜನರ ನಡುವೆ ಭಾಂದವ್ಯ ಮೂಡಿಸುವ ಕೆಲಸ ಪತ್ರಿಕೆಗಳದ್ದಾಗಿದೆ. ಪತ್ರಕರ್ತರು ಯಾವತ್ತೂ ಪತ್ರಿಕಾಧರ್ಮದ ಚೌಕಟ್ಟು ಬಿಟ್ಟು ಹೊರಹೋಗಬಾರದು. ಸಮಾಜದಲ್ಲಿನ ಉತ್ತಮ ಕೆಲಸಗಳನ್ನು ಹೆಚ್ಚಾಗಿ ಬಿಂಬಿಸುವ ಕೆಲಸ ನಡೆಯಬೇಕು ಎಂದು ಪುತ್ತೂರು ನಗರಠಾಣಾ ಎಸೈ ಆಂಜನೇಯ ರೆಡ್ಡಿ ಅಭಿಪ್ರಾಯಪಟ್ಟರು.
ಶನಿವಾರ ಪುತ್ತೂರು ಪ್ರೆಸ್‌ಕ್ಲಬ್ ನಲ್ಲಿ ಪತ್ರಕರ್ತರ ವಾಹನಗಳಿಗೆ ಪ್ರೆಸ್‌ಸ್ಟಿಕ್ಕರ್ ವಿತರಣೆ ಮಾಡಿ ಅವರು ಮಾತನಾಡಿದರು.


ಪತ್ರಿಕಾ ಮಾಧ್ಯಮ ಹಾಗೂ ಪೊಲೀಸ್ ಇಲಾಖೆಯದ್ದು ಸಮಾಜಸೇವೆ. ಪ್ರತೀ ಇಲಾಖೆಯಲ್ಲೂ ಅವರದ್ದೇ ಆದ ಧರ್ಮ ಇದೆ. ಇದನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾದ್ಯಮಗಳಿಂದ ಆಗಬೇಕಾಗಿದೆ. ಸಮಾಜಕ್ಕೆ ಆದರ್ಶವಾಗಿ ಬದುಕುತ್ತಿರುವ ಮಂದಿಯನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಹೆಚ್ಚಾಗಬೇಕು ಎಂದು ಹೇಳಿದರು.


ಸಂಚಾರ ಪೊಲೀಸ್ ಠಾಣೆಯ ಎಸೈ ಉದಯರವಿ ಅವರು ಮಾತನಾಡಿ, ಪತ್ರಿಕಾ ಮಾಧ್ಯಮ ಒಳ್ಳೆಯತನದೊಂದಿಗೆ ಶಕ್ತಿ ಪಡೆದುಕೊಂಡು ಬಂದ ಪ್ರಜಾಪ್ರಭುತ್ವದ ಅಂಗ. ಆದರೆ ಇಂದು ಕೆಲ ಸಾಮಾಜಿಕ ಜಾಲತಾಣಗಳಿಂದ ಸಮಾಜದಲ್ಲಿ ಅಶಾಂತಿ ಹುಟ್ಟಿಸುವ ಕೆಲಸಗಳೂ ನಡೆಯುತ್ತಿವೆ. ಮಾಧ್ಯಮಗಳಿಂದ ಯಾವತ್ತಿಗೂ ಸಮಾಜದಲ್ಲಿ ಬೆಂಕಿ ಸುರಿಸುವ ಹಾಗೂ ಅಶಾಂತಿ ಸೃಷ್ಟಿಸುವ ಕೆಲಸ ನಡೆಯಬಾರದು. ಪತ್ರಕರ್ತರಿಂದ ಸಮಾಜಮುಖಿ ಕೆಲಸಗಳಾಗಲಿ ಎಂದು ಹೇಳಿದರು.


ಮಹಿಳಾಠಾಣೆಯ ಎಸೈ ಸವಿತಾ ಅವರು ಮಾತನಾಡಿ, ಸಮಾಜವನ್ನು ದಿಕ್ಕುತಪ್ಪಿಸುತ್ತಿರುವ ಸೈಬರ್ ಕ್ರೈಮ್ ಇಂದು ಹೆಚ್ಚಾಗುತ್ತಿದೆ. ಮಹಿಳಾ ದೌರ್ಜನ್ಯ ಪ್ರಕರಣಗಳು ಸಮಾಜದ ಸ್ವಾಸ್ಥö್ಯವನ್ನು ಹಾಳುಮಾಡುತ್ತಿವೆ. ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಮಾಧ್ಯಮಗಳ ಸಹಕಾರ ಅಗತ್ಯವಾಗಿದೆ. ಮಕ್ಕಳ ತಂದೆ ತಾಯಿಗಳಿಗೆ ಅರಿವು ಮೂಡಿಸುವ ಕೆಲಸ ಪೊಲೀಸ್ ಇಲಾಖೆ ಮತ್ತು ಮಾಧ್ಯಮಗಳ ಮೂಲಕ ನಡೆದರೆ ಹೆಚ್ಚು ಪ್ರಯೋಜನವಾಗಬಹುದು. ಮಕ್ಕಳ ಮೊಬೈಲ್ ಬಳಕೆ ಬಗ್ಗೆ ಪೋಷಕರು ನಿಗಾ ವಹಿಸುವ ಜತೆಗೆ ಇಂತಹ ಘಟನೆಗಳು ನಡೆದಾಗ ಹೆದರದೆ ಪೊಲೀಸರಿಗೆ ಮಾಹಿತಿ ನೀಡುವ ಕೆಲಸವೂ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘ ಪುತ್ತೂರು ಘಟಕದ ಅಧ್ಯಕ್ಷ ಸಿದ್ದೀಕ್ ನೀರಾಜೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಸುಧಾಕರ್ ಸುವರ್ಣ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ರೈ ಕುತ್ಯಾಳ ವಂದಿಸಿದರು. ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಘಟಕದ ಸದಸ್ಯರಾದ ೩೬ ಪತ್ರಕರ್ತರಿಗೆ ಪ್ರೆಸ್‌ಸ್ಟಿಕ್ಕರ್ ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!