



ಪ್ಯಾರಿ ಸ್: ಗಾಝಾ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಸೇನಾ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಟೀಕೆಗೆ ಗುರಿಯಾಗಿರುವ ಇಸ್ರೇಲ್ ಗೆ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಸ್ಥಗಿತಗೊಳಿಸಬೇಕು ಎಂದು ಶನಿವಾರ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ ಆಗ್ರಹಿಸಿದ್ದಾರೆ.
ಬ್ರಾಡ್ ಕಾಸ್ಟರ್ ಫ್ರಾನ್ಸ್ ಇಂಟರ್ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಮ್ಯಾಕ್ರನ್, “ಇಂದಿನ ಆದ್ಯತೆ ರಾಜಕೀಯ ಪರಿಹಾರವಾಗಿದ್ದು, ಗಾಝಾದಲ್ಲಿನ ಯುದ್ಧಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಸ್ಥಗಿತಗೊಳಿಸಬೇಕು ಎಂಬುದು ನನ್ನ ಅನಿಸಿಕೆಯಾಗಿದೆ” ಎಂದು ತಿಳಿಸಿದ್ದಾರೆ.
“ಫ್ರಾನ್ಸ್ ಯಾವುದೇ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿಲ್ಲ” ಎಂದೂ ಅವರು ಈ ವಾರದ ಆರಂಭದಲ್ಲಿ ಚಿತ್ರೀಕರಿಸಿಕೊಂಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಮೆರಿಕವು ಪ್ರತಿ ವರ್ಷ ಇಸ್ರೇಲ್ ಗೆ 3 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಇಸ್ರೇಲ್ ಗೆ ಶಸ್ತ್ರಾಸ್ತ್ರಗಳ ಸರಬರಾಜನ್ನು ಸ್ಥಗಿತಗೊಳಿಸಲು ಸಾಕಷ್ಟು ಪುರಾವೆ ದೊರೆತಿಲ್ಲ ಎಂದು
ಮೇ ತಿಂಗಳಲ್ಲಿ ಅಮೆರಿಕ ಹೇಳಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಇಸ್ರೇಲ್ ಗೆ ಕೆಲವು ಶಸ್ತ್ರಾಸ್ತ್ರಗಳ ರಫ್ತನ್ನು ಅಮಾನತುಗೊಳಿಸಿರುವುದಾಗಿ ಬ್ರಿಟನ್ ಹೇಳಿತ್ತು. ಆ ಶಸ್ತ್ರಾಸ್ತ್ರಗಳನ್ನು ಅಂತಾರಾಷ್ಟ್ರೀಯ ಮಾನವೀಯ ಕಾಯ್ದೆಗಳನ್ನು ತೀವ್ರ ಸ್ವರೂಪದಲ್ಲಿ ಉಲ್ಲಂಘಿಸಿ ಬಳಸುವ ಸ್ಪಷ್ಟ ಅಪಾಯವಿದೆ ಎಂದು ಅದು ಉಲ್ಲೇಖಿಸಿತ್ತು.
ಕದನವಿರಾಮಕ್ಕೆ ಪದೇ ಪದೇ ಮನವಿ ಮಾಡುತ್ತಿದ್ದರೂ, ಗಾಝಾ ಯುದ್ಧ ಮುಂದುವರಿದಿರುವ ಕುರಿತು ಮ್ಯಾಕ್ರನ್ ತಮ್ಮ ಕಳವಳವನ್ನು ಪುನರುಚ್ಚರಿಸಿದ್ದಾರೆ. “ಈ ಯುದ್ಧವು ದ್ವೇಷದತ್ತ ಸಾಗುತ್ತಿದೆ. ನಮ್ಮ ಮಾತುಗಳನ್ನು ಅವರು ಕೇಳಿಸಿಕೊಂಡಿಲ್ಲ ಎಂಬುದು ನನ್ನ ಭಾವನೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಲೆಬನಾನ್ ನಲ್ಲಿ ಯುದ್ಧ ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಡೆಯುವುದು ಪ್ರಥಮ ಆದ್ಯತೆ ಎಂದೂ ಮ್ಯಾಕ್ರನ್ ಅಭಿಪ್ರಾಯ ಪಟ್ಟಿದ್ದಾರೆ.
